ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಶ್ಚಿಮ ವಲಯದ ಮಕ್ಕಳ ಕಲಿಕಾ ಹಬ್ಬ ಅಕ್ಷರದ ತೇರನ್ನು ಎಳೆಯುವುದರ ಮೂಲಕ ಉದ್ಘಾಟಿಸಲಾಯಿತು. ಪ್ರತಿಯೊಂದು ಸರ್ಕಾರಿ ಶಾಲೆಯ ಒಂದರಿಂದ ಐದನೇ ತರಗತಿಯ ಮಕ್ಕಳಿಗಾಗಿ ಆಯೋಜಿಸುತ್ತಿರುವ ಹಬ್ಬಗಳ ಹಬ್ಬ ಎಫ್ಎಲ್ಎನ್ ಕಲಿಕಾ ಹಬ್ಬ.
ಬನಹಟ್ಟಿ ಪಶ್ಚಿಮ ವಲಯದ ಸಿಆರ್ಪಿ ಜಗದೀಶ ಮೇತ್ರಿ ಮಾತನಾಡಿ, ಇದು 2024-25 ನೇ ಸಾಲಿನಲ್ಲಿ ಓದುತ್ತಿರುವ ಎಫ್ಎಲ್ಎನ್ ಆಧಾರಿತ ಮಕ್ಕಳಿಗಾಗಿ ಹಮ್ಮಿಕೊಳ್ಳುವ ಕಲಿಕೆಗಾಗಿ ಸಂಬಂಧಿಸಿದ ಚಟುವಟಿಕೆಗಳಾಗಿವೆ. ವಿಶೇಷವಾಗಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬ ಸಹಾಯಕ. ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುವಂತಹ ಚಟುವಟಿಕೆಯ ಹಬ್ಬವಾಗಿದೆ. ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರೊಂದಿಗೆ ಹಾಗೂ ಸಮುದಾಯದೊಂದಿಗೆ ಪರಸ್ಪರ ಒಬ್ಬರನ್ನೊಬ್ಬರು ಸಂಪರ್ಕಿಸಲು ಹಾಗೂ ಶಾಲೆಯಲ್ಲಿ ಸಂತೋಷದಾಯಕ ವಾತಾವರಣ ನಿರ್ಮಾಣ ಮಾಡಲು ಮತ್ತು ಕಲಿಕೆಯ ಅವಕಾಶಗಳಲ್ಲಿ ಸಮುದಾಯದವರೆಗೂ ವಿಸ್ತರಿಸಿ ಅವರ ಪಾಲ್ಗೊಳ್ಳುವಿಕೆಯಿಂದ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ,ಹಬ್ಬವನ್ನು ಶಾಲಾ ಶಿಕ್ಷಣ ಇಲಾಖೆಯ ಆದೇಶದನ್ವಯ ಆಯೋಜಿಸಲಾಗಿದೆ. ಅಲ್ಲದೇ ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳು ಮತ್ತು ಆ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ. ಎಫ್ಎಲ್ಎನ್ ಗೆ ಒಳಪಟ್ಟಿರುವ ಮಕ್ಕಳು ತಾವು ಕಲಿಕೆಯಲ್ಲಿ ಯಾವ ರೀತಿಯಾಗಿರುವ ಸಾಧನೆಯನ್ನು ಮಾಡಿರುತ್ತಾರೆ ಮತ್ತು ಅವರು ವಿಭಿನ್ನ ರೀತಿಯ ಸುಮಾರು ಏಳು ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಕಲಿಕೆಯ ಪ್ರಗತಿಯನ್ನು ಸಾಕ್ಷಿಕರಿಸಲು ಈ ಒಂದು ಹಬ್ಬ ಸಾಕ್ಷಿಯಾಗಿದೆ. ಮಕ್ಕಳಿಗೆ ಪ್ರೇರಣದಾಯಕವಾಗಿ ಕಲಿಕೆಯಲ್ಲಿ ಪ್ರೋತ್ಸಾಹವನ್ನು ನೀಡಲು ಈ ಹಬ್ಬ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಬಸವರಾಜ ಹನಗಂಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಹಳಷ್ಟು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮಕ್ಕಳಿಗೆ ಪ್ರೇರಣೆ ನೀಡುವಂತಹ ಅಂಶಗಳು ಇಲಾಖೆಯಿಂದ ಹಮ್ಮಿಕೊಳ್ಳುತ್ತಿರುವುದು ತುಂಬಾ ಸಂತಸದ ವಿಷಯವೆಂದು ಹೇಳಿದರು. ಶಿಕ್ಷಣ ಸಂಯೋಜಕರಾದ ಬಿ.ಎಮ್ ಹಳೆಮನೆ ಅವರು ಮಾತನಾಡಿ ಶಿಕ್ಷಣ ಇಲಾಖೆಯ ಹಮ್ಮಿಕೊಳ್ಳುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಚಟುವಟಿಕೆ ಆಧಾರಯುಕ್ತವಾಗಿ ಮಕ್ಕಳ ಕಲಿಕೆಗೆ ವಿಭಿನ್ನ ವಿಭಿನ್ನ ರೀತಿಯ ಹೊಸ ಆಯಾಮಗಳಲ್ಲಿ ಜ್ಞಾನದ ಹಂಬಲವನ್ನು ನೀಗಿಸುವುದು ಇಂತಹ ಹಬ್ಬಗಳಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ವಿಶೇಷ ಸಾಧನೆಗಾಗಿ ಸಾಧಕರಾದ ಡಿ.ಬಿ ಜಾಯಗೊಂಡ ಮುಖ್ಯ ಗುರುಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದನಮಟ್ಟಿ ಇವರಿಗೆ ” ಅಹಿಂಸಾ ಸಾಧನ ಪ್ರಶಸ್ತಿ” ದೊರೆತಿರುವುದಕ್ಕಾಗಿ ಸನ್ಮಾನಿಸಲಾಯಿತು. ಚಿರಂಜೀವಿ ರೋಡಕರ್, ಎಚ್.ಪಿ.ಎಸ್ ಸದಾಶಿವನಗರ್ ಅವರಿಗೆ “ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವಾರತ್ನ ಪ್ರಶಸ್ತಿ,” ಶ್ರೀಮತಿ S.Y. ಕೌಜಲಗಿ “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ , ಶ್ರೀಮತಿ ಎಸ್.ಬಿ.ಕಂಠಿಮಠ ಅವರಿಗೆ ತಾಲ್ಲೂಕ ಮಟ್ಟದ “ಗಣ ರಾಜ್ಯೋತ್ಸವದ ಪ್ರಶಸ್ತಿ” ಪಡೆದಿರುವ ಕಾರಣ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ , ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಿಕಂದರ್ ,ಸಿ.ಆರ್.ಪಿ ಸಂತೋಷ್ ಬಡ್ಡಿ, ಸಿ ಆರ್ ಪಿ ಶ್ರೀಮತಿ ದಾಕ್ಷಾಯಿಣಿ ಮಂಡಿ. ಸಿ ಆರ್.ಪಿ ಶಿವಕುಮಾರ್ ಕೋಕಟನೂರ್ , ಸಿಆರ್ಪಿ ಮಹೇಶ್ ಸರಗಾವಿ,ಸಿ ಆರ್ ಪಿ J.P. ಕುಲಹಳ್ಳಿ, ಗಜಾನಂದ ಹತ್ತಳ್ಳಿ, ಕೆ . ಎನ್.ತೆಲಗಾಂವ, ಎಸ್ ಬಿ ಪೂಜಾರಿ,ಗುರ್ಲಹೊಸೂರ್ ಉಪಸ್ಥಿತರಿದ್ದರು.