ಹುಬ್ಬಳ್ಳಿ: ‘ವೀರಶೈವ ಲಿಂಗಾಯತ ಶಿವಶಿಂಪಿ ಸಮಾಜದವರು ಕುಲಕಸುಬನ್ನು ಉಳಿಸಿಕೊಂಡು, ಜವಳಿ ಉದ್ಯಮ ಹಾಗೂ ಸಹಕಾರ ಸಂಘ ಸ್ಥಾಪಿಸಲು ನಿವೇಶನ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು. ಇಲ್ಲಿನ ಲಿಂಗರಾಜನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಶಿವಶಿಂಪಿ ಸಂಘವು ವತಿಯಿಂದ ಹಮ್ಮಿಕೊಂಡಿದ್ದ ಹೊಲಿಗೆ ಯಂತ್ರಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಯಕ ನಿಷ್ಠ ಶಿವದಾಸಿಮಯ್ಯ ಸ್ಥಾಪಿಸಿದ ಈ ಸಮಾಜ ಶ್ರೇಷ್ಠವಾದದ್ದು. ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಶ್ರಮಜೀವನ, ಸಂಸ್ಕಾರ, ಸಂಸ್ಕೃತಿಯಿಂದ ಹೆಸರುವಾಸಿಯಾಗಿದೆ. ಸಮಾಜದ ಕಾಯಕ ಪ್ರಜ್ಞೆ ಇತರರಿಗೂ ಮಾದರಿಯಾಗಿದೆ. ಹಿರಿಯರು ತೋರಿದ ಹಾದಿಯಲ್ಲಿ ಸಮಾಜದವರು ಮುನ್ನಡೆಯಬೇಕು’ ಎಂದು ಹೇಳಿದರು. ‘ಶಿವದಾಸಿಮಯ್ಯ ಅವರ ತತ್ವದಂತೆ ಕಾಯಕದ ಜೊತೆಗೆ ಸಮಾಜಕ್ಕೆ ಹೊಲಿಗೆ ಹಾಕಲು ಶ್ರಮಿಸಬೇಕು. ವೃತ್ತಿ ಗೌರವ ಬೆಳೆಸಿಕೊಳ್ಳಬೇಕು. ಕುಲಕಸುಬಿನಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಸಮಾಜ ಸುಧಾರಣೆಗೆ ಶಿಕ್ಷಣ ಅವಶ್ಯವಾಗಿದ್ದು, ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರವನ್ನೂ ಕಲಿಸಬೇಕು’ ಎಂದು ಸಲಹೆ ನೀಡಿದರು.
ಡಿಕೆ ಬೆಂಬಲಿಗರು ಸುಮ್ಮನಿರಿ, ಶಿವಕುಮಾರ್ ಸಿಎಂ ಆಗೋದು ನಿಶ್ಚಿತ- ಮೊಯ್ಲಿ!
‘ಮುಖಂಡರು ಸಮಯ ಹಾಗೂ ದುಡಿಮೆಯ ಒಂದು ಭಾಗವನ್ನು ಸಮಾಜದ ಉದ್ಧಾರಕ್ಕೆ ವಿನಿಯೋಗಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಸಮಾಜದವರನ್ನು ಮೇಲೆತ್ತಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಮೂಲಕ ಸಮಾಜದ ಋಣ ತೀರಿಸಬೇಕು. ಸಭೆ, ಸಮಾರಂಭಗಳಲ್ಲಿ ಸಮಾಜದ ಆಗು–ಹೋಗು, ಸವಾಲು, ಮುಂದಿನ ಹೆಜ್ಜೆಗಳ ಕುರಿತು ಚಿಂತನ–ಮಂಥನ ನಡೆದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಹೇಳಿದರು. ಮುಖಂಡ ಶಶಿಧರ್ ಕರವೀರಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಾತಿ ನಿರ್ಮೂಲನೆಗಾಗಿ ಉದಯಿಸಿದ್ದೇ ಲಿಂಗಾಯತ ಧರ್ಮ. ಎಲ್ಲರನ್ನೂ ಗೌರವಿಸುವ ಈ ಸಮಾಜದಲ್ಲಿ ಕಾಯಕದ ತಳಹದಿ ಮೇಲೆ ಗುರು, ಲಿಂಗ, ಜಂಗಮ ತತ್ವಕ್ಕೆ ಮಹತ್ವ ನೀಡಲಾಗಿದೆ’ ಎಂದರು.
ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಗಂಗಾಧರ ಗಂಜಿ ಅಧ್ಯಕ್ಷತೆ ವಹಿಸಿದ್ದರು. ಶಣ್ಮುಖಪ್ಪ, ರಾಜ್ಯ ಸರ್ಕಾರದ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಸಂಘದ ಪ್ರಧಾನ ಕಾರ್ಯದರ್ಶಿ ಇಷ್ಟಲಿಂಗಪ್ಪ ಮಿರ್ಜಿ, ಆನಂದ ಕಮತಗಿ, ಸುಮಂಗಲಾ ಮುದಕವಿ, ಸರೋಜಾ ಛಬ್ಬಿ ಇದ್ದರು. ‘ವಚನ ಅರ್ಥೈಸಿಕೊಂಡರೆ ಭಾರತ ಸುಂದರ’ ‘12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯ ರಹಿತ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಆಗಿತ್ತು. ಅಲ್ಲಿ ರಚನೆಯಾದ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಇವುಗಳನ್ನು ಅರ್ಥ ಮಾಡಿಕೊಂಡರೆ ಸುಂದರ ಭಾರತ ನಿರ್ಮಾಣ ಸಾಧ್ಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
‘ಬಸವಣ್ಣ, ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಜಾತಿ ಮೀರಿದ ವಿಶ್ವಮಾನವರು. ಕಾಯಕದ ಆಧಾರದಲ್ಲಿ ಹುಟ್ಟಿದ ಜಾತಿ ಇಂದು ಅನಾಹುತ ಸೃಷ್ಟಿಸುತ್ತಿದೆ. ಮಕ್ಕಳಲ್ಲೂ ಜಾತಿಯ ವಿಷ ಬೀಜ ಬಿತ್ತುವುದು ನಿಲ್ಲಬೇಕು’ ಎಂದರು. ‘ಜಾತಿ, ಧರ್ಮದ ಹೆಸರಲ್ಲಿ ಕೋಮು ಗಲಭೆ, ಆಂತರಿಕ ಕಲಹ ಹೆಚ್ಚುತ್ತಿದ್ದು, ದೇಶ ವಿಭಜಿಸುವ ಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ತತ್ವ ಅನುಸರಿಸುವ ಜರೂರತ್ತಿದೆ. ಬಸವಣ್ಣ, ಅಂಬೇಡ್ಕರ್ ತತ್ವ ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.