ಬಾಗಲಕೋಟೆ : ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಅವರು 2025ರ ಕುರಿತು ಆಘಾತಕಾರಿ ಭವಿಷ್ಯವಾಣಿ ನುಡಿದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ, ಭೂಕಂಪ, ಅಗ್ನಿ ಅನಾಹುತಗಳು, ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಅವರು ಉಲ್ಲೇಖಿಸಿದ್ದಾರೆ. ರಾಜಕೀಯ ಅಸ್ಥಿರತೆ ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ, ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿಯೇ ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ರಾಜ್ಯ ಹಾಗೂ ದೇಶದ ರಾಜಕೀಯದ ಬಗ್ಗೆ ಅವರು ಅಚ್ಚರಿಯ ಭವಿಷ್ಯ ವಾಣಿ ನುಡಿದಿದ್ದಾರೆ. 2025ನೇ ಸಾಲಿನ ಭವಿಷ್ಯವಾಣಿ ನುಡಿದ ಅವರು ಹಲವು ಸ್ಫೋಟಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ
ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠ ಕಾಲಜ್ಞಾನದಿಂದಲೇ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಇಲ್ಲಿ ಜಾತ್ರೆ ಆರಂಭವಾಗುತ್ತದೆ. ಶಿವರಾತ್ರಿ ಅಮಾವಾಸ್ಯೆ ಬಳಿಕ ಸದಾಶಿವ ಮುತ್ಯಾನ ಕಾಲಜ್ಞಾನ ನುಡಿಯಲಾಗುತ್ತದೆ.
ಬರಗಾಲದ ಮುನ್ಸೂಚನೆ
‘‘ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಿಯಣ್ಣ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವು ಆಗಲಿದೆ. ಹಣದ ಹಿಂದೆ ಹೋಗುವರ ಬಂಧುತ್ವದ ಸಮಯ ತಿಳಿಯಿರಿಯಣ್ಣ. ಈ ವರ್ಷ ವಿದ್ಯುಚ್ಛಕ್ತಿ, ನೀರಿನ ಕೊರತೆ ಬಹಳ ಆಗುತ್ತದೆ’’ ಎಂದು ಅವರು ನುಡಿದಿದ್ದಾರೆ. ಆ ಮೂಲಕ ಮತ್ತೆ ಬರಗಾಲದ ಮುನ್ಸೂಚನೆ ನೀಡಿದ್ದಾರೆ.
ಬದಲಾಗ್ತಾರಾ ಸಿಎಂ?
ಮತ್ತೊಂದೆಡೆ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಆ ಬಗ್ಗೆಯೂ ಮುತ್ಯಾ ಮಾತನಾಡಿದ್ದಾರೆ. ರಾಜ್ಯ ರಾಜಕೀಯದ ಕುರಿತು ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗಲಿದೆ ಎಂದು ಅವರು ಹೇಳಿದ್ದಾರೆ. ಭೂಕಂಪ, ಅಗ್ನಿ ದುರಂತಗಳು ಹೆಚ್ಚಾಗಲಿವೆ. ಧರ್ಮ ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ಈ ವರ್ಷದಲ್ಲಿ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಮೂಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ