ವಿಜಯನಗರ: ಸಿರಿಧಾನ್ಯ ರಂಗೋಲಿಯಲ್ಲಿ ಚಿತ್ತಾಕರ್ಷಕವಾಗಿ ಮೂಡಿದ ನೇಗಿಲು ಹಿಡಿದ ಅನ್ನದಾತ ಹಾಗೂ ಕೃಷಿ ಇಲಾಖೆ ಯೋಜನೆ ಹಾಗೂ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು. ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ, ಶುಕ್ರವಾರ ಹಂಪಿ ಉತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ, ಕೃಷಿ ವಸ್ತು ಪ್ರದರ್ಶನಕ್ಕೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು.
ಸಿರಿಧಾನ್ಯಗಳ ಬಳಕೆ ಹಾಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿರಿಧಾನ್ಯ ಬೆಳೆಗಳು, ಬೆಳೆಕಾಳುಗಳು, ಇತರೆ ಧಾನ್ಯಗಳಿಂದ ನೇಗಿಲು ಹಿಡಿದ ರೈತ ಹಾಗೂ ಕೃಷಿ ಇಲಾಖೆಯ ಮುಖ್ಯ ಯೋಜನೆಗಳಾದ ಕೃಷಿ ಯಾಂತ್ರಿಕರಣ, ಸಂಸ್ಕರಣೆ, ಮಣ್ಣು ಆರೈಕೆ ಅಭಿಯಾನ, ಸೂಕ್ಷ್ಮ ನೀರಾವರಿ ಯೋಜನೆಗಳನ್ನು ರಂಗೋಲಿ ಚಿತ್ತಾರದ ಮೂಲಕ ವೈವಿಧ್ಯಮಯವಾಗಿ ರಚಿಸಲಾಗಿತ್ತು. ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನದಲ್ಲಿ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಮತ್ತು ಜಮೀನುಗಳಲ್ಲಿ ನೀರಿನ ಹೊಂಡ ನಿರ್ಮಾಣ ಹಾಗೂ ಮಿಶ್ರ ಬೇಸಾಯದ ಜತೆಗೆ ಸಮಗ್ರ ಹಾಗೂ ಸುಸ್ಥಿರ ಕೃಷಿ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ರೈತರಿಗೆ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಹಳ್ಳಿಮನೆ ಆಕರ್ಷಣೆ: ಸೋಬಾನೆಯ ಸೊಬಗು
ಕೃಷಿ ಇಲಾಖೆಯ ವಸ್ತು ಪ್ರದರ್ಶನದಲ್ಲಿ ನಿರ್ಮಿಸಲಾದ ಹಳ್ಳಿಮನೆ ಕಲ್ಪನೆ ಗ್ರಾಮೀಣ ಸೊಗಡಿನ ಚಿತ್ರಣ ನೈಜವಾಗಿ ನೋಡುಗರಿಗೆ ಕಟ್ಟಿಕೊಡುತ್ತಿದೆ. ಬೀಸುವ ಕಲ್ಲು, ನೀರಿನ ಬಾವಿ, ಒನಕೆಯ ಮೂಲಕ ಧಾನ್ಯಗಳ ಒಕ್ಕಣೆ, ಹೊಸಿಗೆ ಎಲ್ಲವೂ ಕಳೆದ ಹೋದ ಗ್ರಾಮೀಣ ಜನ ಜೀವನವನ್ನು ನೋಡುಗರಿಗೆ ಕಟ್ಟಿಕೊಡುತ್ತದೆ. ಇನ್ನೂ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರದ ರೇಣುಕಮ್ಮ, ಹುಲಿಗೆಮ್ಮ, ಹನುಮಕ್ಕ, ಹುಚ್ಚೆಂಗಮ್ಮ ಹಾಗೂ ಗೌರಮ್ಮ ಹಾಡಿದ ಸೋಬಾನ ಪದಗಳು ಜಾನಪದ ಸಾಹಿತ್ಯ ಸೊಬಗನ್ನು ಬಿಂಬಿಸುತ್ತಿವೆ. ಸಚಿವ ಜಮೀರ್ ಅಹ್ಮದ್ ಖಾನ್ ಮಹಿಳೆಯರೊಂದಿಗೆ ಕೂತು ಬೀಸುಕಲ್ಲಿನಲ್ಲಿ ಧಾನ್ಯಗಳನ್ನು ಬೀಸಿದರು. ಒಕ್ಕಣೆಯಲ್ಲಿ ಒನಕೆ ಹಿಡುದು ಕಾಳು ಒಪ್ಪಮಾಡಿದರು. ಹಳ್ಳಿ ಮನೆ ಮುಂದಿನ ಬಾವಿಯಲ್ಲಿ ನೀರು ಸೇದಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಹೆಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಜೊತೆಯಾದರು.
ನಂತರ ಕುರುವತ್ತಿ ಬಸವೇಶ್ವರ ಪ್ರತಿಕೃತಿ, ಸಿರಿಧಾನ್ಯಗಳಿಂದ ನಿರ್ಮಿಸಲಾಗಿರುವ ನೇಗಿಲು ಹಿಡಿದ ರೈತ ಹಾಗೂ ಕೃಷಿ ಇಲಾಖೆಯ ಮುಖ್ಯ ಯೋಜನೆಗಳನ್ನು ವೀಕ್ಷಿಸಿದರು. ಈ ವೇಳೆ ಜಿ.ಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀಹರಿ ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಹಲವು ಗಣ್ಯರು, ರೈತರು, ಸಾರ್ವಜನಿಕರು ಇದ್ದರು.