ಬೀದರ್ : ಮಾ.2ರಿಂದ 4ರ ವರೆಗೆ ಬೀದರ ನಗರದಲ್ಲಿ 15ನೇ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ನಡೆಯಲಿದ್ದು, 1,500ಕ್ಕೂ ಹೆಚ್ಚು ನಾಟಿ ವೈದ್ಯರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ದಿನಗಳಲ್ಲಿ ಒಟ್ಟು ಹನ್ನೊಂದು ಗೋಷ್ಠಿಗಳು ಜರುಗಲಿವೆ. ನಾಟಿ ವೈದ್ಯರು, ತಜ್ಞರು, ಸಂಶೋಧಕರು ಭಾಗವಹಿಸಿ ವಿಷಯ ಮಂಡಿಸುವರು. ನಾಟಿ ವೈದ್ಯ ಪದ್ಧತಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆಯಾದ ನಂತರ ಜೀವವೈವಿಧ್ಯ ಮಂಡಳಿಗೆ ವರದಿ ಒಪ್ಪಿಸುತ್ತಾರೆ. ಮಂಡಳಿಯ ಅಧ್ಯಕ್ಷ ನಾನೇ ಇದ್ದು, ಅದರ ಮೇಲೆ ಸರ್ಕಾರ ಕ್ರಮ ಜರುಗಿಸಲಿದೆ ಎಂದರು.
ಆಲಮಟ್ಟಿ ಡ್ಯಾಂನಿಂದ ತೆಲಂಗಾಣ ರಾಜ್ಯಕ್ಕೆ ನೀರು ಬಿಡುಗಡೆ ವಿರೋಧಿಸಿ ರೈತರ ಹೋರಾಟ
ನಗರದ ನೌಬಾದ್ ಸಮೀಪದ ಬೆಲ್ದಾಳೆ ಕನ್ವೆಷನ್ ಹಾಲ್ನಲ್ಲಿ ಮಾ.2ರಂದು ಬೆಳಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿವಿಧ ಗೋಷ್ಠಿಗಳು ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಲಿವೆ. ಕರ್ನಾಟಕ ರಾಜ್ಯ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣ. ಪಶ್ಚಿಮ ಘಟ್ಟ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಅನೇಕ ಪ್ರಭೇದಗಳ ಸಸ್ಯಗಳಿವೆ. ವಿವಿಧ ಪ್ರಭೇದದ ಪ್ರಾಣಿ, ಕೀಟ, ಪಕ್ಷಿ ಸಂಕುಲಗಳಿವೆ. ಸಂರಕ್ಷಣೆ ನಮ್ಮೆಲ್ಲರ ಹೊಣೆ. ಹಿಂದೆ ಋಷಿ, ಮುನಿಗಳು ಯಾವುದೇ ರೋಗಗಳಿಗೆ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಇಂದು ಆಧುನಿಕ ಆರೋಗ್ಯ ವೈದ್ಯ ಪದ್ಧತಿ ಬೆಳೆದಿದೆ. ಔಷಧಿ ಗುಣಧರ್ಮವಿಲ್ಲದ ಯಾವುದೇ ಸಸಿಗಳಿಲ್ಲ. ಆ ಸಸಿಗಳಲ್ಲಿ ಯಾವ ಔಷಧಿ ಇದೆ, ಯಾವ ರೋಗಕ್ಕೆ ಪರಿಹಾರ ಸಿಗಬಹುದು ಎಂಬ ಅರಿವು, ಮಾಹಿತಿ ಕಡಿಮೆಯಾಗುತ್ತಿದೆ. ಈ ಸಮ್ಮೇಳನದಲ್ಲಿ ಆ ಜ್ಞಾನದ ವಿನಿಮಯವಾಗಲಿದೆ ಎಂದರು.