ಮಂಡ್ಯ : ಪಿಎಸ್ಎಸ್ಕೆ ಗುತ್ತಿಗೆ ನೌಕರರು ಹಾಗೂ ನಿರಾಣಿ ಗ್ರೂಫ್ಸ್ ನಡುವೆ ಜಟಾಜಟಿ ನಡೆದಿದೆ. ಮಂಡ್ಯದ ಪಾಂಡವಪುರದ ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಗೆ ಇದೀಗ ನಿರಾಣಿ ಗ್ರೂಪ್ಸ್ ಕಚೇರಿಗೆ ಬೀಗ ಹಾಕಿ ಹೊರನಡೆದಿದೆ.
ಕಳೆದ ಕೆಲ ವರ್ಷಗಳಿಂದ ಕಾರ್ಖಾನೆಯ ಗುತ್ತಿಗೆ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಆಡಳಿತ ಮಂಡಳಿ ಈ ಹಿಂದೆ ಸುಮಾರು 21 ಗುತ್ತಿಗೆ ನೌಕರರನ್ನ ಕೆಲಸದಿಂದ ವಜಾಗೊಳಿಸಿತ್ತು. ಆಡಳಿತ ಮಂಡಳಿ ನಿರ್ಧಾರದ ವಿರುದ್ದ ಗುತ್ತಿಗೆ ನೌಕರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ವಾಪಸ್ 21 ಜನರನ್ನ ಕೆಲಸಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ಕೂಡ ನೀಡಿತ್ತು.
ಆದರೆ ನ್ಯಾಯಾಲಯದ ಆದೇಶಕ್ಕೆ ಕ್ಯಾರೆ ಎನ್ನದ ಆಡಳಿತ ಮಂಡಳಿ ವಿರುದ್ಧ ಅನೇಕ ದಿನಗಳಿಂದ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಇದಲ್ಲದೇ ನೌಕರರ ಸಮಸ್ಯೆ ಆಲಿಸಿ ಆಡಳಿತ ಮಂಡಳಿಗೆ ಗಡವು ನೀಡಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ, 21 ಗುತ್ತಿಗೆ ನೌಕರರನ್ನ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಿ ಅಥವಾ ನೀವೆ ಕಾರ್ಖಾನೆಯಿಂದ ಹೊರ ನಡೆಯಿರಿ ಎಂದು ಹೇಳಿದ್ದರು. ಇದೀಗ ಶಾಸಕರ ಹೇಳಿಕೆ ಹಿನ್ನೆಲೆ ಇಂದು ನೌಕರರನ್ನ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು 2020ರಲ್ಲಿ ಕಾರ್ಖಾನೆಯನ್ನ 40 ವರ್ಷಗಳ ಲೀಸ್ಗೆ ಪಡೆದಿದ್ದ ನಿರಾಣಿ ಗ್ರೂಪ್ಸ್ ಹೊರನಡೆದಿದೆ.