ಧಾರವಾಡ: 2024-25 ಹಂಗಾಮಿನಲ್ಲಿ ಬೆಳೆಹಾನಿ ಸಂಬಂಧಿಸಿದಂತೆ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಿ ಸರಕಾರಕ್ಕೆ ಆರ್ಥಿಕ ನಷ್ಟಮಾಡಿದ ಆರೋಪದಡಿ ಕಲಘಟಗಿ ತಹಶೀಲ್ದಾರ್ ವಿ.ಎಸ್. ಮುಳುಗುಂದಮಠ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ರಾಘವೇಂದ್ರ ಟಿ. ಆದೇಶ ಹೊರಡಿಸಿದ್ದು, ತಹಶೀಲ್ದಾರ್ ಗ್ರೇಡ್-1 ಆಗಿದ್ದ ಮುಳುಗುಂದಮಠ ಅವರಿಗೆ ಅಮಾನತಿನ ಅವಧಿಯಲ್ಲಿ ಕೆಸಿಎಸ್ಆರ್ ನಿಯಮದನ್ವಯ ನಿಗದಿಪಡಿಸಿದ ಜೀವನಾಧಾರ ಭತ್ಯೆ ಪಡೆಯಲು ಅನುವಾಗುವಂತೆ ವಿಜಯನಗರ ಜಿಲ್ಲೆಯ ಕೂಡಗಿ ತಹಶೀಲ್ದಾರ್ ಗ್ರೇಡ್- 2 ಖಾಲಿ ಹುದ್ದೆಗೆ ವರ್ಗಾಯಿಸಲಾಗಿದೆ. ಅಲ್ಲದೇ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡ ಅಕ್ರಮದಲ್ಲಿ ಭಾಗಿಯಾದ ನೌಕರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, “ಕಲಘಟಗಿ ತಹಶೀಲ್ದಾರ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ನಿರ್ದೇಶನಗಳನ್ನು ಪಾಲಿಸಿ ಸರಕಾರ ಕ್ರಮ ವಹಿಸಲಾಗುವುದು,” ಎಂದು ಮಾಹಿತಿ ನೀಡಿದ್ದಾರೆ.