ಇತ್ತೀಚೆಗಷ್ಟೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಿಸಿರುವ ಮಲಯಾಳಂನ ಹೆಸರಾಂತ ನಟ ಮೋಹನ್ ಲಾಲ್ ಅವರೊಂದಿಗೆ ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಕೆಲ ಸಮಯ ಕಳೆದಿದ್ದಾರೆ. ಮೋಹನ್ ಲಾಲ್ ಹಾಗೂ ತಂಡದವರ ಜೊತೆ ತುಪ್ಪದ ಬೆಡಗಿ ಭರ್ಜರಿ ಭೋಜನ ಸವಿದಿದ್ದು ಅವುಗಳ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಶೀಘ್ರದಲ್ಲೇ ಬಿಗ್ ಅನೌನ್ಸ್ಮೆಂಟ್ ಇದೆಯೆಂದೂ ತಿಳಿಸಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ 8 ಫೋಟೋಗಳನ್ನು ಹಂಚಿಕೊಂಡಿರುವ ನಟಿ ರಾಗಿಣಿ ದ್ವಿವೇದಿ, ನಟ ಮೋಹನ್ ಲಾಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ, ”ಇದು 2025ರಲ್ಲಿ ನಿಜವಾಗಿಯೂ ವಿಶೇಷ ಮತ್ತು ಅತ್ಯುತ್ತಮವಾಗಿ ಉಳಿಯಲಿದೆ. ನನಗೆ ಮತ್ತು ನನ್ನ ತಂಡದ ಆತಿಥ್ಯ ವಹಿಸಿದ್ದಕ್ಕಾಗಿ ತುಂಬಾನೇ ಧನ್ಯವಾದಗಳು. ನೀವು ಪ್ರತಿದಿನ ನಮ್ಮನ್ನು ಪ್ರೇರೇಪಿಸುತ್ತೀರಿ ಮತ್ತು ನಮ್ಮ ಕೊಲಾಬರೇಷನ್ (ಸಿನಿಮಾ) ಅನ್ನು ಮತ್ತೊಮ್ಮೆ ಜಗತ್ತಿನೊಂದಿಗೆ ಹಂಚಿಕೊಳ್ಳಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಈ ಫೋಟೋಗಳಲ್ಲಿರುವ ಆಹಾರವೇ ಹೇಳುತ್ತಿದೆ ನಿಮ್ಮ ಆತಿಥ್ಯವನ್ನು. ಸಂಪೂರ್ಣ ಆಹಾರ ಸ್ವರ್ಗ. 2025ರಲ್ಲಿ ನಿಮಗಾಗಿ ಬರುತ್ತಿದ್ದೇವೆ. ಬಿಗ್ ಸರ್ಪ್ರೈಸ್ಗಾಗಿ ನಮ್ಮೊಂದಿಗಿರಿ” ಎಂದು ಬರೆದುಕೊಂಡಿದ್ದಾರೆ.
ರೋಮಾಂಚಕ ಆ್ಯಕ್ಷನ್ ಸೀನ್ಗಳನ್ನು ಹೊಂದಿರುವ ಈ ಬಹುನಿರೀಕ್ಷಿತ ಚಿತ್ರದಲ್ಲಿ ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ಖ್ಯಾತಿಯ ರಾಗಿಣಿ ದ್ವಿವೇದಿ ಜೊತೆ ಶನಾಯ ಕಪೂರ್ ಸೇರಿದಂತೆ ಹಲವರು ನಟಿಸಿದ್ದಾರೆ. ಸಮರ್ಜಿತ್ ಹೆಸರೂ ಕೂಡಾ ಕೇಳಿಬಂದಿದೆ. 2023ರಲ್ಲಿ ಪ್ರಾರಂಭಗೊಂಡ ‘ವೃಷಭ’ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ‘ಕಂದಹಾರ್’ ಸಿನಿಮಾ ಬಳಿಕ ಎರಡನೇ ಬಾರಿಗೆ ಮೋಹನ್ ಲಾಲ್ ಜೊತೆಗೆ ರಾಗಿಣಿ ದ್ವಿವೇದಿ ತೆರೆ ಹಂಚಿಕೊಂಡಿದ್ದಾರೆ.