ಭುವನೇಶ್ವರ(ಒಡಿಶಾ): ಒಡಿಶಾದ ಹಿರಿಯ ನಟ ಉತ್ತಮ್ ಮೊಹಂತಿ ಗುರುವಾರ ರಾತ್ರಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 66 ವರ್ಷ ವಯಸ್ಸಿನ ಮೊಹಂತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೊಹಂತಿ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಫೆಬ್ರವರಿ 8 ರಂದು ಭುವನೇಶ್ವರದಿಂದ ದೆಹಲಿಗೆ ವಿಮಾನದ ಮೂಲಕ ಕರೆದೊಯ್ಯಲಾಯಿತು. ಉತ್ತಮ್ ಅವರು ತಮ್ಮ ಪತ್ನಿ, ನಟಿಯೂ ಆದ ಅಪರಾಜಿತಾ ಮೊಹಂತಿ ಮತ್ತು ಮಗ ನಟ, ನಿರ್ಮಾಪಕ ಬಾಬುಶನ್ ಅವರನ್ನು ಅಗಲಿದ್ದಾರೆ.
“ಒಡಿಶಾದ ಜನಪ್ರಿಯ ನಟ ಉತ್ತಮ್ ಮೊಹಂತಿ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರ ಅಗಲುವಿಕೆ ಒಡಿಯಾ ಕಲಾ ಕ್ಷೇತ್ರದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಒಡಿಯಾ ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ ಯಾವಾಗಲೂ ಶಾಶ್ವತ. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಮತ್ತು ಮೃತರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಮೊಹಂತಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ” ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಆದೇಶಿಸಿದರು.
1977 ರಲ್ಲಿ ಒಡಿಯಾ ಚಿತ್ರ ‘ಅಭಿಮಾನ್‘ ಮೂಲಕ ಮೊಹಂತಿ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 130 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದರು. ‘ನಿಜುಮ್ ರತಿರಾ ಸತಿ‘ (1979), ‘ಫುಲಾ ಚಂದನ‘ (1982), ‘ಜಿಯಾತಿ ಸೀತಾ ಪರಿ‘ (1983) ಮತ್ತು ‘ದಂಡಾ ಬಲುಂಗ‘ (1984) ಚಿತ್ರಗಳಲ್ಲಿ ಅವರ ಅತ್ಯುತ್ತಮ ಅಭಿನಯಗಳು. ಅವರು ಸುಮಾರು 30 ಬಂಗಾಳಿ ಚಲನಚಿತ್ರಗಳು ಮತ್ತು ‘ನಯಾ ಜಹೇರ್‘ ಎಂಬ ಹಿಂದಿ ಚಲನಚಿತ್ರದಲ್ಲೂ ಕೆಲಸ ಮಾಡಿದ್ದರು. ‘ಸಾರಾ ಆಕಾಶ‘ ಸೇರಿದಂತೆ ಕೆಲವು ಟಿವಿ ಧಾರಾವಾಹಿಗಳಲ್ಲಿ ಮೊಹಂತಿ ನಟಿಸಿದ್ದಾರೆ.