ವಿಜಯಪುರ : ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಮಾತನಾಡುತ್ತಾ, ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಖಾತಾ ನೀಡಲು ಅಭಿಯಾನವನ್ನು ಹಮ್ಮಿಕೊಂಡಿದ್ದು, ಸೂಕ್ತ ಪರಿಶೀಲನೆ ನಡೆಸಿ ಇ-ಖಾತಾ ನೀಡಲು ಕ್ರಮವಹಿಸಬೇಕು. ಐತಿಹಾಸಿಕ ಸ್ಮಾರಕ, ರಾಜಕಾಲುವೆ ಸೇರಿದಂತೆ ಒತ್ತುವರಿಯಾದ ಜಾಗಗಳಿಗೆ ಇ-ಖಾತೆ ಒದಗಿಸದಂತೆ ಸೂಕ್ತ ಎಚ್ಚರ ವಹಿಸಬೇಕು. ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಪಟ್ಟಿ ಸಿದ್ಧಪಡಿಸಿಕೊಂಡು ಇ-ಖಾತಾ ಒದಗಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಗುಂಟಾ ಲೇಔಟ್ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಕಡಿಮೆ ಹಣದಲ್ಲಿ ಗುಂಟಾ ನಿವೇಶನಗಳು ಬರುವುದರಿಂದ ಜೀವನಕ್ಕೊಂದು ಸೂರು ನಿರ್ಮಿಸಿಕೊಳ್ಳುವ ಕನಸು ಕಂಡು ಬಡವರು ಇಂತಹ ಗುಂಟಾ ನಿವೇಶನಗಳನ್ನು ಪಡೆದುಕೊಂಡಿರುತ್ತಾರೆ. ಇಂತಹ ಬಡವರಿಗೆ ಯಾವುದೇ ತೊಂದರೆ ನೀಡಬಾರದು. ಆದರೆ ಗುಂಟಾ ನಿವೇಶನ ನಿರ್ಮಾಣ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಮೂಲಕ ಗುಂಟಾ ಲೇಔಟ್ಗಳ ಕಡಿವಾಣ ಹಾಕಬೇಕು. ಇನ್ನೂ ಮುಂದೆ ಗುಂಟಾ ಲೇಔಟ್ಗಳು ನಿರ್ಮಾಣವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಸಚಿವ ಡಾ.ಎಂ.ಬಿ.ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇನ್ನೂ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ ಅನಾನೂಕೂಲವಾಗದಂತೆ ನೋಡಿಕೊಂಡು ವಿದ್ಯಾರ್ಥಿಗಳ ಶಾಲೆಯ ಸಮಯಕ್ಕನುಗುಣವಾಗಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸೂಕ್ತ ಬಸ್ಗಳ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಭಾಗದ ಕೆಲವು ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳಿಗೆ ಯಾವುದೇ ಅನಾನೂಲವಾಗದಂತೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರಿಗೆ ನಿಗಮದ ಅಧಿಕಾರಿಗಳು ಸಭೆ ನಡೆಸಿ, ಸೂಕ್ತವಾದ ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಬಸ್ಗಳ ವ್ಯವಸ್ಥೆಗೆ ಕ್ರಮ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಸಚಿವರಾದ ಶಿವಾನಂದ ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಅನಂದ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.