ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಇಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದಿದ್ದ ಗಲಭೆಯಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ ದೀಪ್ ಸಿಂಗ್ರನ್ನು ಗುಂಪೊಂದು ಹತ್ಯೆಗೈದಿತ್ತು.
ಈ ಗುಂಪಿನ ನಾಯಕತ್ವವನ್ನು ಸಜ್ಜನ್ ಕುಮಾರ್ ವಹಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.12 ರಂದು ನ್ಯಾಯಾಲಯವು ಕುಮಾರ್ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ದೂರುದಾರೆ ಜಸ್ವಂತ್ ಅವರ ಪತ್ನಿ ಅಪರಾಧಿಗೆ ಮರಣದಂಡನೆ ವಿಧಿಸುವಂತೆ ಕೋರಿದ್ದರು. ಆದರೆ ನ್ಯಾಯಾಲಯ ದೂರುದಾರರ ಮನವಿಯನ್ನು ತಿರಸ್ಕರಿಸಿ, ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ದಿನಕ್ಕೆ ಕೇವಲ 70 ರೂ. ಹೂಡಿಕೆಯಿಂದ 3 ಲಕ್ಷ ರೂ. ಗಳಿಸಿ: ಅಂಚೆ ಕಚೇರಿಯ ಬೆಸ್ಟ್ ಸ್ಕೀಮ್ ಇದು!
ಕುಮಾರ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಇನ್ನೂ ಮರಣದಂಡನೆಗೆ ಗುರಿಯಾಗಬಹುದಾದ ಪ್ರಕರಣಗಳಲ್ಲಿ ಅಪರಾಧಿಯ ಮಾನಸಿಕ ಸ್ಥಿತಿಯ ವರದಿಯನ್ನು ಪಡೆಯುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ, ತಿಹಾರ್ ಸೆಂಟ್ರಲ್ ಜೈಲಿನಿಂದ ಸಜ್ಜನ್ ಕುಮಾರ್ ಅವರ ಮಾನಸಿಕ ಮೌಲ್ಯಮಾಪನದ ಬಗ್ಗೆ ಮನೋವೈದ್ಯರಿಂದ ವರದಿಯನ್ನು ನ್ಯಾಯಾಲಯ ಕೇಳಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಗುಂಪೊಂದು ಸಿಖ್ಖರ ಮೇಲೆ ಹಿಂಸಾಚಾರ ನಡೆಸಿತ್ತು. ಈ ವೇಳೆ ಲೂಟಿ, ಆಸ್ತಿಪಾಸ್ತಿಗಳ ನಾಶ, ಕೊಲೆಗಳು ನಡೆದಿದ್ದವು.