ಬೆಂಗಳೂರು:- ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರಂಜಾನ್ ಹಬ್ಬಕ್ಕೂ ಮುನ್ನ ಹಣ ಕಳೆದುಕೊಂಡವರಿಗೆ ಪರಿಹಾರ ಕೊಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ.
ಸಂತ್ರಸ್ತರಿಗೆ ಯಾವಾಗ ಮತ್ತು ಹೇಗೆ ಹಣ ಹಿಂತಿರುಗಿಸಬೇಕು? ಎಂಬ ಕುರಿತು ಸೋಮವಾರ ವಿಕಾಸಸೌಧ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ಐಎಂಎ ಹಗರಣದಿಂದ ಹಣ ಕಳೆದುಕೊಂಡ ಹಲವರು ಭಾಗಿಯಾಗಿದ್ದರು. ಈ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದ ಅವರು, ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ಐಎಂಎ ನಲ್ಲಿ ಹಣ ಹೂಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ
ಹಣ ಡಬ್ಲಿಂಗ್ ಆಸೆಯಿಂದಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರ ಖಾತೆಗಳ ಮೂಲಕ 3213.58 ಕೋಟಿ ರೂ.ಗಳನ್ನು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕಂಪೆನಿಯ ಒಟ್ಟು ಠೇವಣಿದಾರರ ಸಂಖ್ಯೆ 69069. ಈ ಪೈಕಿ 1400 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಐಎಂಎ ಕಾಲಕಾಲಕ್ಕೆ ಠೇವಣಿದಾರರಿಗೆ ನೀಡುತ್ತಾ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ವಿಶೇಷ ನ್ಯಾಯಾಲಯದ ಆದೇಶದಂತೆ ಕಂಪೆನಿ ಖಾತೆಯಲ್ಲಿದ್ದ 19.12 ಕೋಟಿ ರೂ.ಗಳನ್ನು 50,000 ರೂ.ಗಳಂತೆ 6858 ಜನ ಸಂತ್ರಸ್ತರ ಖಾತೆಗಳಿಗೆ 2022 ಏಪ್ರಿಲ್ನಲ್ಲಿ ಜಮೆ ಮಾಡಲಾಗಿತ್ತು.
66.66 ಕೋಟಿ ರೂ.ಗಳನ್ನು 53,142 ಜನ ಸಂತ್ರಸ್ತರ ಖಾತೆಗಳಿಗೆ 8/11/2023 ರಂದು ಜಮೆ ಮಾಡಲಾಗಿತ್ತು. 1.28 ಕೋಟಿ ರೂ.ಗಳನ್ನು 626 ಸಂತ್ರಸ್ತರ ಖಾತೆಗಳಿಗೆ 23/5/2024 ರಂದು ಜಮೆ ಮಾಡಲಾಗಿತ್ತು. 276 ಜನ ಸಂತ್ರಸ್ತರಿಗೆ 36.14 ಲಕ್ಷ ರೂ.ಗಳನ್ನು 7/11/2024 ರಂದು ಜಮೆ ಮಾಡಲಾಗಿತ್ತು. ಒಟ್ಟಾರೆ ಈವರೆಗೆ 87.43 ಕೋಟಿ ರೂ.ಗಳನ್ನು 60902 ಜನ ಸಂತ್ರಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು.
ಐಎಂಎ ಕಂಪೆನಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಈಗಾಗಲೇ ಸರ್ಕಾರ ವಶಕ್ಕೆ ಪಡೆದಿದೆ. ಚರಾಸ್ಥಿಗಳ ಮೌಲ್ಯ 106.92 ಕೋಟಿ ಹಾಗೂ ಸ್ಥಿರಾಸ್ತಿಗಳ ಮೌಲ್ಯ 401.92 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕಂಪೆನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ., ನಗದು ಹಣ 11.72 ರೂ. ಹೂಡಿಕೆ ಪತ್ರ 11.06 ಕೋಟಿ ರೂ. ಸೇರಿದಂತೆ ಒಟ್ಟಾರೆ 534.5 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿದೆ.