ಮಳೆಗಾಲ ಬಂತೆಂದರೆ ಬಟ್ಟೆ ಒಣಗಿಸುವುದೇ ದೊಡ್ಡ ತಲೆನೋವು. ಒಗೆದ ಬಟ್ಟೆಯನ್ನು ಒಂದು ಕಡೆ ಹರವಿ, ಬಳಿಕ ಗಾಳಿಯಾಡುವ ಕಡೆ ಒಣಗಲು ಹಾಕಿದರೂ ಮರುದಿನ ನೋಡಿದರೆ ಬಟ್ಟೆ ಒದ್ದೆಯಿಂದ ಕೂಡಿರುತ್ತದೆ. ಸೂರ್ಯನ ಕಿರಣಗಳು ತಾಗದಿದ್ದರಂತೂ ಬಟ್ಟೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಕೂಡ ಕೆಲ ಅಲರ್ಜಿ ಮತ್ತು ರೋಗಗಳು ಉಂಟಾಗುತ್ತದೆ.
ಕೆಲವರು ಯಾವುದೇ ಕಾಲದಲ್ಲಾಗಲಿ ಬಟ್ಟೆಯನ್ನು ಮನೆಯೊಳಗೆ ಒಣಹಾಕುತ್ತಾರೆ. ಬಹುಶಃ ಹೊರಗಡೆ ಬಟ್ಟೆ ಒಣಹಾಕಲು ಜಾಗ ಇಲ್ಲದೇ ಇರಬಹುದು. ಆದರೆ ಇನ್ನೂ ಕೆಲವರು ಹೊರಗಡೆ ಜಾಗವಿದ್ದರೂ ಮನೆಯೊಳಗೆ ಬಟ್ಟೆ ಒಣ ಹಾಕುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಈ ಅಭ್ಯಾಸ ಎಷ್ಟು ಅಪಾಯಕಾರಿ ಎನ್ನುವುದು ನಿಮಗೆ ಗೊತ್ತಾ?
ನಮ್ಮಲ್ಲಿ ಬಹುತೇಕರು ಒದ್ದೆ ಟವೆಲ್ನ್ನು ಕುರ್ಚಿಯ ಮೇಲೋ, ಬಾಗಿಲಿನ ಮೇಲೋ ಒಣಗಲು ಹಾಕುತ್ತೇವೆ. ಇದು ಮನೆ ತುಂಬಾ ವಿಚಿತ್ರವಾದ ವಾಸನೆಯನ್ನು ಉಂಟುಮಾಡುತ್ತದೆ ಮತ್ತು ಮನೆಯೊಳಗೆ ಒಣಗಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ಹಲವು ಬಾರಿ ಕೇಳಿರಬಹುದು. ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವುದರಿಂದ ಜನರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ.
ಒದ್ದೆಯಾದ ಬಟ್ಟೆಗಳು ಶ್ವಾಸಕೋಶದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಒದ್ದೆಯಾದ ಬಟ್ಟೆಗಳಿಂದಾಗಿ, ಮನೆಯಲ್ಲಿ ಆರ್ದ್ರತೆ ಹೆಚ್ಚಾಗುತ್ತದೆ ಮತ್ತು ಧೂಳಿನ ಕಣಗಳು ಬಟ್ಟೆ, ಗೋಡೆಗಳು ಮತ್ತು ಪೀಠೋಪಕರಣಗಳಿಗೆ ಅಂಟಿಕೊಳ್ಳುತ್ತವೆ. ಹೆಚ್ಚುತ್ತಿರುವ ಆರ್ದ್ರತೆಯಿಂದಾಗಿ, ಮನೆಯಲ್ಲಿ ಶಿಲೀಂಧ್ರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆಗಳು ಕೂಡ ನಡೆದಿದೆ.
ಮನೆಯೊಳಗೆ ಬಟ್ಟೆಗಳನ್ನು ಒಣಗಿಸುವುದರಿಂದ ಕೋಣೆಯ ಆರ್ದ್ರತೆಯು ಶೇಕಡಾ 30 ರಷ್ಟು ಹೆಚ್ಚಾಗುತ್ತದೆ, ಇದು ಆಸ್ಪರ್ಜಿಲಸ್ ಫ್ಯೂಮಿಗಾಟಸ್ ಎಂಬ ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳು ಬೆಳೆಯಲು ಕಾರಣವಾಗುತ್ತದೆ. ಈ ಸೂಕ್ಷ್ಮಜೀವಿಗಳಿಂದಾಗಿ ಶ್ವಾಸಕೋಶದ ಸೋಂಕು ಮತ್ತು ಸೈನುಟಿಸ್ ಸಮಸ್ಯೆಯ ಅಪಾಯ ಹೆಚ್ಚಾಗುತ್ತದೆ. ಶಿಲೀಂಧ್ರವು ಉಸಿರಾಟದ ತೊಂದರೆ ಮತ್ತು ಅಲರ್ಜಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಆಸ್ಪರ್ಜಿಲಸ್ ಫ್ಯೂಮಿಗಾಟಸ್ ಒಂದು ಸಪ್ರೊಫೈಟಿಕ್ ಶಿಲೀಂಧ್ರವಾಗಿದೆ. ಈ ಶಿಲೀಂಧ್ರವು ಸಾಮಾನ್ಯವಾಗಿ ಮಣ್ಣಿನಲ್ಲಿ ಕಂಡುಬರುತ್ತದೆ. ಈ ಶಿಲೀಂಧ್ರವು ಉಸಿರಾಟದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವಿಶೇಷವಾಗಿ ಉಸಿರಾಟದ ಪ್ರದೇಶ, ಸೈನಸ್ಗಳು ಮತ್ತು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಉಸಿರಾಟದ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚು. ಇದೇ ಕಾರಣಕ್ಕೆ ಮನೆಯೊಳಗೆ ಬಟ್ಟೆ ಒಣಗಿಸುವುದನ್ನು ನಿಷೇಧಿಸಲಾಗಿದೆ.
ಮನೆಯೊಳಗೆ ಬಟ್ಟೆಗಳನ್ನು ಒಣಗಿಸುವುದರಿಂದ ಬೆಳೆಯುವ ಸೂಕ್ಷ್ಮಜೀವಿಗಳು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ ಆಸ್ತಮಾ, ಪಲ್ಮನರಿ ಫೈಬ್ರೋಸಿಸ್, ದೀರ್ಘಕಾಲದ ಪ್ರತಿರೋಧಕ ಪಲ್ಮನರಿ ಕಾಯಿಲೆ (COPD) ಇತ್ಯಾದಿ. ಇವೆಲ್ಲವೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು, ನೀವು ಈ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ, ಮನೆಯೊಳಗೆ ಬಟ್ಟೆಗಳನ್ನು ಒಣಗಿಸಬೇಡಿ. ಇದಲ್ಲದೆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ನಂತರ, ಗಾಳಿಯಾಡುವ ಸ್ಥಳದಲ್ಲಿ ಒಣಗಿಸಿ. ನೀವು ಈ ಬಟ್ಟೆಗಳನ್ನು ಕುರ್ಚಿಯ ಮೇಲೆ ಒಣಗಿಸುವ ಬದಲು ಪರದೆ ಹಳಿಯ ಮೇಲೆ ಒಣಗಿಸಬಹುದು.