ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಡಬ್ಲುಪಿಎಲ್ನ 8ನೇ ಪಂದ್ಯವನ್ನು 33 ರನ್ ಗಳ ಅಂತರದಿಂದ ಗೆದ್ದುಕೊಂಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ 177 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 19.3 ಓವರ್ಗಳಲ್ಲಿ 144 ರನ್ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ ಯುಪಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಡೆಲ್ಲಿ ಮೂರನೇ ಸ್ಥಾನದಲ್ಲಿದೆ.
ಯುಪಿ ವಾರಿಯರ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಚಿನ್ಲೆ ಹೆನ್ರಿ ಅಬ್ಬರಿಸಿದರು. ಇವರು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ವೇಗವಾಗಿ ಅರ್ಧಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಇವರು 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ಔಟ್ ಆದರು. ಇವರು ತಮ್ಮ ಅರ್ಧಶತಕವನ್ನು 18ನೇ ಎಸೆತದಲ್ಲಿ ಪುರ್ಣಗೊಳಿಸಿದರು. ಈ ಮೂಲಕ ಮಹಿಳಾ ಲೀಗ್ನಲ್ಲಿಇತಿಹಾಸವನ್ನು ಬರೆದರು.
ಯುಪಿ ತಂಡದ ಪರ ಕೀರಣ್ ನವಗೆರಿ 17, ನಾಯಕಿ ದೀಪ್ತಿ ಶರ್ಮಾ 13, ತಹಿಲಾ ಮೆಗ್ರಾತ್ 24, ಶ್ವೆತಾ ಸೆರಾವತ್ 11, ಸೋಪಿಯಾ 12 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4, ಅರುಂಧತಿ ರೆಡ್ಡಿ ಹಾಗೂ ಮರಿಜಾನ್ನೆ ಕಪ್ಪ್ ತಲಾ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಆರಂಭ ಕಳಪೆಯಾಗಿತ್ತು. ಸ್ಟಾರ್ ಆರಂಭಿಕ ಆಟಗಾರ್ತಿ ಮೆಗ್ ಲ್ಯಾನಿಂಗ್ ನಿರಾಸೆ ಅನುಭವಿಸಿದರು. ಸ್ಟಾರ್ ಆಟಗಾರ್ತಿ ಶೆಫಾಲಿ ವರ್ಮಾ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇವರ ಆಟ 24 ರನ್ಗಳಿಗೆ ಕೊನೆಯಾಯಿತು. ಮಿಡ್ಲ್ ಆರ್ಡರ್ನಲ್ಲಿ ಸ್ಟಾರ್ ಆಟಗಾರ್ತಿಯರಾರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಕರ್ನಾಟಕದ ನಿಕಿ ಪ್ರಸಾದ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 18 ರನ್ ಬಾರಿಸಿದರು. ಶಿಖಾ ಪಾಂಡೆ 15 ರನ್ ಸಿಡಿಸಿದರು.