ಜೆರುಸಲೇಂ: ಗಾಝಾ ಕದನ ವಿರಾಮ ಒಪ್ಪಂದದ ಪ್ರಕಾರ ಹಮಾಸ್ ಇಸ್ರೇಲಿ ಒತ್ತೆಯಾಳು ಶಿರಿ ಬಿಬಾಸ್ ಅವರ ಮೃತದೇಹವನ್ನು ಗುರುವಾರ ಹಸ್ತಾಂತರಿಸಬೇಕಿತ್ತು. ಆದರೆ ಅವರು ಹಸ್ತಾಂತರಿಸಿದ್ದು ಗಾಝಾದ ಮಹಿಳೆಯೊಬ್ಬರ ಮೃತದೇಹವನ್ನು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಊಹಿಸಲೂ ಸಾಧ್ಯವಿಲ್ಲದ ಸಿನಿಕತನದ ರೀತಿಯಲ್ಲಿ ಅವರು ಶಿರಿ ಬಿಬಾಸ್ ಮೃತದೇಹದ ಬದಲು ಗಾಝಾದ ಮಹಿಳೆಯೊಬ್ಬರ ಮೃತದೇಹವನ್ನು ಶವಪೆಟ್ಟಿಗೆಯಲ್ಲಿಟ್ಟು ರವಾನಿಸಿದ್ದಾರೆ. ಇದು ಗಾಝಾ ಕದನ ವಿರಾಮ ಒಪ್ಪಂದದ ಕ್ರೂರ ಮತ್ತು ದುಷ್ಟ ಉಲ್ಲಂಘನೆಯಾಗಿದೆ. ಗಾಝಾದಲ್ಲಿರುವ ನಮ್ಮ ಒತ್ತೆಯಾಳುಗಳನ್ನು ಜೀವಂತ ಅಥವಾ ಮೃತಪಟ್ಟ ರೀತಿಯಲ್ಲಿ ಸ್ವದೇಶಕ್ಕೆ ತರಲು ನಾವು ದೃಢನಿರ್ಧಾರ ಮಾಡಿದ್ದು ಕದನ ವಿರಾಮದ ಉಲ್ಲಂಘನೆಗಾಗಿ ಹಮಾಸ್ ಸಂಪೂರ್ಣ ಬೆಲೆ ತೆರಬೇಕಾಗುತ್ತದೆ’ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಹಮಾಸ್ ಶಿರಿ ಬಿಬಾಸ್, ಆಕೆಯ ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬ ವೃದ್ಧ ವ್ಯಕ್ತಿಯ ಮೃತದೇಹಗಳನ್ನು ರೆಡ್ಕ್ರಾಸ್ ಗೆ ಹಸ್ತಾಂತರಿಸಿತ್ತು. ಆದರೆ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಇಬ್ಬರು ಮಕ್ಕಳು ಹಾಗೂ ವೃದ್ಧ ವ್ಯಕ್ತಿಯನ್ನು ಗುರುತಿಸಲಾಗಿದೆ. ಆದರೆ ನಾಲ್ಕನೇ ಮೃತದೇಹ ಶಿರಿ ಬಿಬಾಸ್ ರದ್ದಲ್ಲ ಎಂಬುದು ದೃಢಪಟ್ಟಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.