ಶಿವಮೊಗ್ಗ : ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ 2023 ಕ್ಕಿಂತ ಮೊದಲು ಏನಿತ್ತು ಅದೇ ರೀತಿ ಪದ್ಧತಿಯನ್ನು ಈ ಬಾರಿ ಅನುಸರಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಗ್ರೇಸ್ ಮಾರ್ಕ್ಸ್ ಇರೋದಿಲ್ಲ. ಆದರೆ 33ಕ್ಕಿಂತ ಕಡಿಮೆ ಅಂಕ ಪಡೆಯುವವರನ್ನು ಪಾಸ್ ಮಾಡಲು ಬರುವುದಿಲ್ಲ ಎಂದರು.
ಹಿಜಾಬ್ ಧರಿಸಿ ಪರೀಕ್ಷೆ ಬರೆಯುವ ಇರುವ ಗೊಂದಲ ಕುರಿತು ಪ್ರತಿಕ್ರಿಯಿಸಿ, ಈ ವಿಷಯ ಕೋರ್ಟ್ ನಲ್ಲಿ ಇರುವುದರಿಂದ ಅದರ ಬಗ್ಗೆ ಏನೂ ಮಾತನಾಡಲ್ಲ. ಅದರ ಬಗ್ಗೆ ಚರ್ಚೆ ಬೇಡ ಎಂದರು. ಇನ್ನೂ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಚಿಕ್ಕಿಯ ಗುಣಮಟ್ಟದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದರ ವಿತರಣೆ ನಿಲ್ಲಿಸಲಾಗಿದೆ. ಅದರ ಬದಲು ಬಾಳೆಹಣ್ಣು ನೀಡಲಾಗುತ್ತಿದೆ. ನಮ್ಮ ಇಲಾಖೆಯಲ್ಲಿ ಶಿಕ್ಷಕರ ನೇಮಕ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಸಿದ್ದತೆ ನಡೆಸಲಾಗುತ್ತಿದೆ. ಈಗ 1.500 ಕೋಟಿ ರೂಪಾಯಿ ನಮ್ಮ ಶಿಕ್ಷಣ ಇಲಾಖೆಗೆ ನೀಡಲಾಗಿದೆ.ಅತಿಥಿ ಶಿಕ್ಷಕರ ಸಂಬಳ ಯಾವುದು ನಿಲ್ಲಿಸಿಲ್ಲ. ಕೆಲ ತಾಂತ್ರಿಕ ಸಮಸ್ಯೆಯಿಂದ ಸಂಬಳ ನಿಲ್ಲಿಸಲಾಗಿತ್ತು. ಈಗ ನಿನ್ನೆ ಸಚಿವ ಸಂಪುಟದ ನಂತರ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಶಿವಮೊಗ್ಗದ ಆಶ್ರಯ ಬಡಾವಣೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಅಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗಕ್ಕೆ 25ಕ್ಕೆ ಬರಲಿದ್ದಾರೆ. ಅವರಿಗೆ ಅಲ್ಲಿನ ಮೂಲ ಸೌಕರ್ಯದ ಬಗ್ಗೆ ಮನವಿ ಮಾಡಲಾಗುವುದು ಎಂದರು.