ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ಹಾಗೂ ನಟಿ ಧನಶ್ರೀ ವರ್ಮಾ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯು ಹಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೋರ್ಟ್ ಮೂಲಕ ಇಬ್ಬರು ಅಧಿಕೃತವಾಗಿ ದೂರವಾಗಿದ್ದಾರೆ. ಈ ಬೆನ್ನಲ್ಲೇ ಧನಶ್ರೀ ಚಹಲ್ ಅವರಿಂದ 60 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಯನ್ನು ಧನಶ್ರೀ ಕುಟುಂಬ ಮೂಲಗಳು ತಳ್ಳಿಹಾಕಿದೆ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ನಾವು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಸಿದ್ದಾರೆ.
‘ಜೀವನಾಂಶದ ಅಂಕಿ ಅಂಶದ ಬಗ್ಗೆ ಹರಡುತ್ತಿರುವ ಸುದ್ದಿ ಸಂಪೂರ್ಣ ಆಧಾರರಹಿತವಾಗಿದೆ. ಇದರಿಂದ ನಾವು ತೀವ್ರವಾಗಿ ಬೇಸರಗೊಂಡಿದ್ದೇವೆ. ನಾವು ಯಾವುದೇ ಮೊತ್ತವನ್ನು ಕೇಳಿಲ್ಲ. ನಮಗೆ ಯಾವುದೇ ಬೇಡಿಕೆಯಿಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಇಂತಹ ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ತೀವ್ರ ಬೇಜವಾಬ್ದಾರಿಯಾಗಿದೆ. ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕು ಮತ್ತು ತಪ್ಪು ಮಾಹಿತಿಯನ್ನು ಹರಡುವ ಮೊದಲು ಸತ್ಯವನ್ನು ಪರಿಶೀಲಿಸಬೇಕು. ಮತ್ತು ಪ್ರತಿಯೊಬ್ಬರ ಗೌಪ್ಯತೆಗೆ ಗೌರವವನ್ನು ನೀಡಬೇಕು’ ಎಂದು ಧನಶ್ರೀ ಕುಟುಂಬ ಸ್ಪಷ್ಟನೆ ನೀಡಿದೆ.
ಧನಶ್ರೀ ಪರ ವಕೀಲ ಅದಿತಿ ಮೋಹನ್ ಕೂಡ ಪ್ರತಿಕ್ರಿಯಿಸಿದ್ದು ತಪ್ಪು ಮಾಹಿತಿ ಹರಡದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳು ವರದಿ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸಬೇಕು, ಸಾಕಷ್ಟು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಸಬೇಕು ಎಂದಿದ್ದಾರೆ.
ಧನಶ್ರೀ ಮತ್ತು ಚಹಲ್ 2020ರ ಡಿಸೆಂಬರ್ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಲಿಟ್ಟಿದ್ದರು. ಚಹಲ್ ಲಾಕ್ಡೌನ್ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು. ಕಳೆದ 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ಜೋಡಿ ಹೊಂದಾಣಿಕೆಯ ಸಮಸ್ಯೆಯಿಂದ ವಿಚ್ಛೇದನ ಪಡೆದಿದ್ದಾರೆ.