ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೋಹಕ ಕಣ್ಣುಗಳ ಮೋನಾಲಿಸ ರಾತ್ರೋ ರಾತ್ರಿ ಸ್ಟಾರ್ ಆಗಿ ಮಿಂಚಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೊಟೋಗಳು ವೈರಲ್ ಆಗಿ ಬಾಲಿವುಡ್ ನಿಂದಲೂ ಆಫರ್ ಬಂದಿತ್ತು. ಜೊತೆಗೆ ಕೆಲ ಜಾಹೀರಾತುಗಳಲ್ಲಿ ಮಿಂಚಿದ್ದಳು. ಈಕೆ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾಳೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಆಕೆಯ ಮೊದಲ ಸಿನಿಮಾ ಚಿತ್ರೀಕರಣ ಪ್ರಾರಂಭ ಆಗುವುದಕ್ಕೆ ಮುಂಚೆಯೇ ನಿಂತು ಹೋಗಿದೆ ಎಂಬ ಸುದ್ದಿ ಕೇಳಿ ಬಂದಿದೆ.
‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್ ಅಲಿಯಾಸ್ ವಸೀಮ್ ರಿಜ್ವಿ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಸನೋಜ್ ಮಿಶ್ರಾ ಒಬ್ಬ ಸುಳ್ಳುಗಾರ, ಮೋಸಗಾರ, ಮಹಾನ್ ಕುಡುಕ, ಆತ ಸುಳ್ಳು ಹೇಳಿ ಹಲವರಿಗೆ ಮೋಸ ಮಾಡಿದ್ದಾನೆ. ಯುವತಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಈಗ ಕುಂಭಮೇಳ ಮೊನಲಿಸಾಗೂ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಸನೋಜ್ ಮಿಶ್ರಾ ನಿರ್ದೇಶನ ಮಾಡಿರುವ ಯಾವೊಂದು ಸಿನಿಮಾ ಸಹ ಈ ವರೆಗೆ ಬಿಡುಗಡೆ ಆಗಿಲ್ಲ. ಆತ ಮೊನಲಿಸಾಳಿಗೆ ತರಬೇತಿ ನೀಡುವ ನೆಪದಲ್ಲಿ ಆಕೆಯನ್ನು ಬೇರೆ ಬೇರೆ ಇವೆಂಟ್ಗಳಿಗೆ ಕಳಿಸಿ ತಾನು ಹಣ ಮಾಡಿಕೊಳ್ಳುತ್ತಿದ್ದಾನೆ. ಮೊನಲಿಸಾಳ ಕುಟುಂಬದವರು ಆ ವ್ಯಕ್ತಿಯ ಬಗ್ಗೆ ಜಾಗೃತೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮೊನಲಿಸಾ ಸಹ ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಾನು ಮಧ್ಯ ಪ್ರದೇಶದಲ್ಲಿ ನಟನಾ ತರಬೇತಿಯಲ್ಲಿ ನಿರತವಾಗಿದ್ದು, ಅದರ ಜೊತೆಗೆ ಕಲಿಕೆಯಲ್ಲೂ ತೊಡಗಿಕೊಂಡಿದ್ದೇನೆ ಎಂದಿದ್ದಾರೆ. ಅಲ್ಲದೆ ಸನೋಜ್ ಮಿಶ್ರಾ ತಮ್ಮನ್ನು ಮಗಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು, ಯಾರೂ ಸಹ ನನ್ನ ಸುರಕ್ಷತೆ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.