ಕೋಲಾರ – ಇತ್ತೀಚೆಗಷ್ಟೇ ಮುಕ್ತಾಯವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ-25ರ ಒಟ್ಟಾರೆ 10.27 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಭಾಗವಾಗಿದ್ದ ₹315 ಕೋಟಿ ರೂಪಾಯಿಗಳ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣದ ಅನುಷ್ಠಾನ ಆರಂಭಗೊಂಡಿತು.
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಂಪನಿ ನಿರ್ಮಿಸಲಿರುವ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಭೂಮಿಪೂಜೆ ನೆರವೇರಿಸುವುದರೊಂದಿಗೆ ಈ ಕಾರ್ಯಯೋಜನೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ ಅವರು, “ಕೈಗಾರಿಕಾ ಅಗತ್ಯಗಳಿಗೆ ಬೇಕಾಗುವ ಬಾಟ್ಲಿಂಗ್ ಮತ್ತು ಶುದ್ಧೀಕರಣ ಸಾಧನಗಳ ತಯಾರಿಕೆಗೆ ದೇಶದಲ್ಲಿ ಅಪಾರ ಬೇಡಿಕೆ ಇದೆ. ಇದನ್ನು ಮನಗಂಡು ಕ್ರೋನ್ಸ್, ರಾಜ್ಯದಲ್ಲಿ ಈ ಸ್ಥಾವರ ಆರಂಭಿಸಲು ಮುಂದಾಗಿದೆ. ಇದರಿಂದ ಬಂಡವಾಳ ಹೂಡಿಕೆಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ವೇಮಗಲ್ ಕೈಗಾರಿಕಾ ಪ್ರದೇಶವು ಬೆಂಗಳೂರಿಗೆ ಕೂಡ ಹತ್ತಿರದಲ್ಲಿ ಇರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ” ಎಂದರು.