ಮೆಲ್ಬೋರ್ನ್: ಸಮುದ್ರ ತೀರದಲ್ಲಿ ಸುಮಾರು 150 ತಿಮಿಂಗಲಗಳು ಬಂದು ಬಿದ್ದಿರುವ ಘಟನೆ ಆಸ್ಟ್ರೇಲಿಯಾದ ವಾಯುವ್ಯ ಪ್ರಾಂತ್ಯದ ತಾಸ್ಮಾನಿಯಾ ರಾಜ್ಯದ ಅರ್ಥೂರ್ ನದಿ ಸಮುದ್ರವನ್ನು ಸಂಗಮಿಸುವ ಸ್ಥಳದಲ್ಲಿ ನಡೆದಿದೆ.
ಈ 150 ತಿಮಿಂಗಿಲಗಳ ಪೈಕಿ 136 ತಿಮಿಂಗಿಲಗಳು ಇನ್ನೂ ಜೀವಂತವಿದ್ದು, ಉಳಿದವು ಮೃತಪಟ್ಟಿವೆ. ಜೀವಂತವಿರುವ ತಿಮಿಂಗಿಲಗಳ ಪೈಕಿ ಕೆಲವು ಜೀವನ್ಮರಣದ ಹೋರಾಟ ನಡೆಸುತ್ತಿವೆ ಎಂದು ಆಸ್ಟ್ರೇಲಿಯಾದ ಪರಿಸರ ಸಚಿವಾಲಯದ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿಮಿಂಗಿಲಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಮುದ್ರ ತೀರಕ್ಕೆ ಬಂದು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಾಸ್ಮಾನಿಯಾ ರಾಜ್ಯದ ಅರ್ಥೂರ್ ನದಿ ಸಮುದ್ರವು ಜನವಸತಿ ರಹಿತ ಹಾಗೂ ಸಾರಿಗೆ ಸಂಪರ್ಕಗಳಿಲ್ಲದ ಪ್ರದೇಶವಾಗಿರುವುದರಿಂದ, ಅಲ್ಲಿಗೆ ಪರಿಹಾರ ಕಾರ್ಯಾಚರಣೆ ತಂಡ ತಲುವುದಕ್ಕೆ ತುಂಬಾ ಸಮಸ್ಯೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಿದ್ದೂ, ಕೆಲವು ಮರಿ ತಿಮಿಂಗಿಲಗಳನ್ನು ಆಳ ಸಮುದ್ರಕ್ಕೆ ಡೂಡುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದ್ದಾರೆ
ಇಷ್ಟೊಂದು ದೊಡ್ಡ ಪ್ರಮಾಣದ ತಿಮಿಂಗಿಲಗಳು ಸಮುದ್ರದ ತೀರಕ್ಕೆ ಬಂದು ಬಿದ್ದಿರುವ ಕಾರಣ ಇನ್ನೂ ತಿಳಿದು ಬಂದಿಲ್ಲ. ಆಳ ಸಮುದ್ರದಲ್ಲಿ ಸಂಭವಿಸಿರುವ ಯಾವುದೊ ದೊಡ್ಡ ಸದ್ದು, ಹವಾಮಾನ ವೈಪರೀತ್ಯ ಅಥವಾ ಅನಾರೋಗ್ಯದಿಂದಾಗಿ ಅವು ಸಮುದ್ರ ತೀರಕ್ಕೆ ಬಂದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.