ಕಂಪ್ಲಿ : ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರಕಾರ ಉಚಿತವಾಗಿ ವಸತಿ ನಿವೇಶನಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿ ಕಂಪ್ಲಿ ಕಟ್ಟಡ ಕಾರ್ಮಿಕರ ಸಂಘದ ನೂರಾರು ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸ್ಥಳೀಯ ಉದ್ಭವ ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಿಆರ್ ಅಂಬೇಡ್ಕರ್ ಸರ್ಕಲ್ ಪುರಸಭೆ ಮುಂಭಾಗದ ಜಮಾಯಿಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಿಐಟಿಯು ಕಂಪ್ಲಿ ತಾಲೂಕು ಅಧ್ಯಕ್ಷರಾದ ಹೊನ್ನೂರ್ ಸಾಹೇಬ್ ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಪರಿಕರಗಳಲ್ಲಿ ಮುಖ್ಯವಾಗಿ ಮರಳಿನ ದರ ಹೆಚ್ಚಾಗಿರುವುದರಿಂದ ಮಧ್ಯಮ ಹಾಗೂ ಕೆಳ ವರ್ಗದವರಿಗೆ ಮರಳು ದೊರೆಯದಂತಾಗಿದೆ. ಮನೆ ಕಟ್ಟಲು ಸಾಕಷ್ಟು ಜನರು ಹಿಂಜರಿಯುವಂತಾಗಿದೆ. ಇದರಿಂದ ಕಟ್ಟಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದ್ದು ಬೀದಿಗೆ ಬರುವಂತಾಗಿದೆ. ಕಾರ್ಮಿಕರಿಗೆ ಕಟ್ಟಡ ನಿರ್ಮಾಣ ಕಾರ್ಯಬಿಟ್ಟು ಬೇರೆ ಕೆಲಸ ಮಾಡಲುಗೊತ್ತಿಲ್ಲ. ಮರಳು ಉಳ್ಳವರ ಪಾಲಾಗುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಇತರ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸಿದಂತೆ ಕಟ್ಟಡ, ಕೂಲಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಕಂಪ್ಲಿ ತಾಲೂಕು ಕಟ್ಟಡ ಕಾರ್ಮಿಕರ ಸಂಘಕ್ಕೆ ಸರಕಾರದಿಂದ ನಿವೇಶನ ನೀಡಬೇಕು ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಂಘದ ಸದಸ್ಯರು ಆಗ್ರಹಿಸಿದರು.