ಯುಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗಾಣಿಸುವ ಕುರಿತು ಸೌದಿ ಅರೇಬಿಯಾದಲ್ಲಿ ನಡೆದ ರಷ್ಯಾ- ಅಮೆರಿಕಾದ ಉನ್ನತಮಟ್ಟದ ಸಭೆ ಅಂತ್ಯಗೊಂಡಿದೆ. ಸಭೆಯಲ್ಲಿ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಆಗಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸಿದೆ.
ಈ ಸಭೆಯಲ್ಲಿ ಯುಕ್ರೇನ್ ಅಧಿಕಾರಿಗಳು ಭಾಗಿಯಾಗಿರಲಿಲ್ಲ. ಈ ವಾರದ ಮಾತುಕತೆಯಲ್ಲಿ ಕೈವ್ ಭಾಗವಹಿಸದಿದ್ದರೆ, ಆ ಸಭೆಯ ಯಾವುದೇ ಫಲಿತಾಂಶವನ್ನು ತಮ್ಮ ದೇಶ ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಯುರೋಪಿಯನ್ ಮಿತ್ರರಾಷ್ಟ್ರಗಳು ಸಹ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಗೆ ದಾರಿ ಮಾಡಿಕೊಡುವುದೂ ಸಹ ಈ ಸಭೆಯ ಉದ್ದೇಶವಾಗಿತ್ತು. ಮಾತುಕತೆ ಮುಗಿದ ನಂತರ, ಪುಟಿನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಾಕೋವ್ ರಷ್ಯಾದ ಚಾನೆಲ್ ಒನ್ಗೆ ಮಾಹಿತಿ ನೀಡಿದ್ದು, ಟ್ರಂಪ್- ಪುಟಿನ್ ಸಭೆಗೆ ಇನ್ನೂ ದಿನಾಂಕ ನಿಗದಿಪಡಿಸಲಾಗಿಲ್ಲ ಆದರೆ ಮುಂದಿನ ವಾರ ಅದು ನಡೆಯುವುದು “ಅಸಂಭವ” ಎಂದು ಹೇಳಿದ್ದಾರೆ.
ಮಾತುಕತೆಗಳು ಪ್ರಾಥಮಿಕವಾಗಿ “ಯುಎಸ್-ರಷ್ಯಾದ ಸಂಬಂಧಗಳನ್ನು ಪುನಃಸ್ಥಾಪಿಸುವುದು, ಜೊತೆಗೆ ಉಕ್ರೇನ್ ವಿರುದ್ಧದ ಯುದ್ಧವನ್ನು ಇತ್ಯರ್ಥಗೊಳಿಸುವುದರ ಕುರಿತು ಸಂಭವನೀಯ ಮಾತುಕತೆಗಳನ್ನು ಸಿದ್ಧಪಡಿಸುವುದು ಮತ್ತು ಇಬ್ಬರು ಅಧ್ಯಕ್ಷರ ಸಭೆಯನ್ನು ಆಯೋಜಿಸುವುದರ ಮೇಲೆ ಕೇಂದ್ರೀಕರಿಸಲ್ಪಡುತ್ತವೆ ಎಂದು ಯೂರಿ ಉಷಾಕೋವ್ ಹೇಳಿದ್ದಾರೆ.
ಯುಎಸ್ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಮಾತನಾಡಿ, ರಷ್ಯನ್ನರು ಶಾಂತಿಯನ್ನು ಬಯಸುವುದರ ಬಗ್ಗೆ ಎಷ್ಟು ಗಂಭೀರರಾಗಿದ್ದಾರೆ ಮತ್ತು ವಿವರವಾದ ಮಾತುಕತೆಗಳನ್ನು ಪ್ರಾರಂಭಿಸಬಹುದೇ ಎಂದು ನಿರ್ಧರಿಸುವ ಗುರಿಯನ್ನು ಈ ಸಭೆ ಹೊಂದಿದೆ ಎಂದಿದ್ದಾರೆ.