ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ಇತ್ತೀಚೆಗೆ ಆಪ್ತರ ಜೊತೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಸದ್ಯ ಕೊಂಚ ಸುಧಾರಿಸಿಕೊಂಡಿದ್ದು ಸದ್ಯದಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಮಧ್ಯೆ ದರ್ಶನ್ ಗೆ ಮೈಸೂರಿಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ.
ದರ್ಶನ್ ಗೆ ಮೈಸೂರಿನ ಮೇಲೆ ವಿಶೇಷ ಪ್ರೀತಿ. ಹೀಗಾಗಿ ಬಿಡುವು ಸಿಕ್ಕಾಗೆಲ್ಲಾ ಮೈಸೂರಿಗೆ ತೆರಳುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ ಬಳಿಕ ಅದು ಸಾಧ್ಯವಾಗಿರಲಿಲ್ಲ. ಸದ್ಯ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್ ನ್ಯಾಯಾಲಯದ ಅನುಮತಿ ಪಡೆದು ಬೇರೆ ಊರುಗಳಿಗೆ ಪ್ರಯಾಣಿಸಬೇಕಾಗಿದೆ. ಈ ಮೊದಲು ಕೂಡ ಅವರು ಕೋರ್ಟ್ ಅನುಮತಿ ಪಡೆದು ಮೈಸೂರಿಗೆ ತೆರಳಿದ್ದರು. ಈಗ ಇನ್ನೊಮ್ಮೆ ಅವರಿಗೆ ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ.
ಫೆಬ್ರವರಿ 20ರ ತನಕ ಮೈಸೂರಿಗೆ ತೆರಳಲು ಆರೋಪಿ ದರ್ಶನ್ಗೆ ಕೋರ್ಟ್ ಅನುಮತಿ ನೀಡಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಿಂದ ದರ್ಶನ್ ಅವರು ಅನುಮತಿ ಪಡೆದುಕೊಂಡಿದ್ದಾರೆ. ಅವರಿಗೆ ಬೆನ್ನು ನೋವು ಇದೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡಬೇಕಿದೆ. ಹಾಗಾಗಿ ಅವರು ಮೈಸೂರಿಗೆ ತೆರಳಲಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದಾರೆ. ಅವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಅವರಿಬ್ಬರನ್ನು ಸೇರಿ ಇನ್ನುಳಿದ ಆರೋಪಿಗಳಿಗೆ ಕೂಡ ಹೈಕೋರ್ಟ್ನಲ್ಲಿ ಜಾಮೀನು ನೀಡಲಾಗಿದೆ. ಬೇಲ್ ಸಿಕ್ಕಿದ್ದರೂ ಕೂಡ ಆತಂಕ ಕಡಿಮೆ ಆಗಿಲ್ಲ. ಯಾಕೆಂದರೆ, ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಮಾರ್ಚ್ 18ರಂದು ವಿಚಾರಣೆ ನಡೆಯಲಿದೆ.