ಹೊಸದಿಲ್ಲಿ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಹಿಳೆ ಶೆಹಝಾದಿ ಎಂಬ ಮಹಿಳೆಯನ್ನು ಅಬುಧಾಬಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಮಾಡಲಾಗಿದೆ. ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಬುಧಾಬಿ ನ್ಯಾಯಾಲಯ 33 ವರ್ಷದ ಶೆಹಝಾದಿಗೆ ಈ ಘೋರವಾದ ಶಿಕ್ಷೆಯನ್ನು ನೀಡಿದೆ.
ಶೆಹಝಾದಿಯನ್ನು 24 ಗಂಟೆಯೊಳಗಡೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ವಿಷಯವು ಪರಿಗಣನೆಯಲ್ಲಿದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ದುಬೈಯ ಅಲ್ ವತ್ಬಾ ಜೈಲಿನಲ್ಲಿರುವ ಖೈದಿ ಶಹಝಾದಿ ತನ್ನ ತಂದೆಗೆ ದೂರವಾಣಿ ಕರೆ ಮಾಡಿ, ಅಬ್ಬೂ.. ಇದು ನನ್ನ ಕೊನೆಯ ಕರೆ. ಈಗ ನನ್ನನ್ನು ಬೇರೆ ಕೋಣೆಗೆ ಸ್ಥಳಾಂತರಿಸಲಾಗಿದೆ. ನಾನು ನಿಮಗೆ ಮತ್ತೆ ಕರೆ ಮಾಡಲು ಸಾಧ್ಯವಾಗದೆ ಇರಬಹುದು ಎಂದು ತನಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಶಹಝಾದಿ ತನ್ನ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದ್ದಾರೆ.
ಶಹಝಾದಿಯ ಕರೆಯ ಬಳಿಕ ಅವರ ಕುಟುಂಬವು ಕಣ್ಣೀರಿನಲ್ಲಿದೆ. ತಂದೆ ಶಬ್ಬೀರ್ ಖಾನ್ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಉತ್ತರಪ್ರದೇಶದ ಬಂದಾ ಜಿಲ್ಲೆಯ ಮತೌಂಧ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊಯ್ರಾ ಮುಗ್ಲಿ ಗ್ರಾಮದ ಶಹಝಾದಿಗೆ ಫೇಸ್ ಬುಕ್ ಮೂಲಕ ಆಗ್ರಾದ ನಿವಾಸಿ ಉಝೈರ್ ಎಂಬಾತನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಬಾಲ್ಯದಲ್ಲಿಯೇ ಅಡುಗೆ ಮಾಡುವಾಗ ಶಹಝಾದಿಗೆ ಮುಖ ಸುಟ್ಟಿದ್ದು, 2021ರಲ್ಲಿ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ಉಝೈರ್ ಆಗ್ರಾಕ್ಕೆ ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ತನ್ನ ಸಂಬಂಧಿಕರಾದ ಫೈಝ್ ಮತ್ತು ನಾದಿಯಾ ಎಂಬ ದಂಪತಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಆಕೆಯನ್ನು ದಂಪತಿ ದುಬೈಗೆ ಕರೆದುಕೊಂಡು ಹೋಗಿದ್ದಾರೆ.
ಶಹಝಾದಿ ಇದ್ದ ಮನೆಯಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಅವರ ಮಗುವಿನ ಆರೋಗ್ಯ ಹದಗೆಟ್ಟು ಮೃತಪಟ್ಟಿದೆ. ಮಗು ಮೃತಪಟ್ಟ ಎರಡು ತಿಂಗಳ ನಂತರ ಮಗುವಿನ ಸಾವಿಗೆ ಶಹಝಾದಿ ಕಾರಣ ಎಂದು ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಈ ಕುರಿತ ತನಿಖೆಯ ನಂತರ ದುಬೈ ನ್ಯಾಯಾಲಯವು ಶಹಝಾದಿ ತಪ್ಪಿತಸ್ಥೆ ಎಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಶಹಝಾದಿ ಅಲ್ಬತ್ವಾ ಜೈಲಿನಲ್ಲಿ ಬಂಧಿಸಿಡಲಾಗಿದೆ.