2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದು ಬಾಂಗ್ಲಾದೇಶಕ್ಕೂ ಆರಂಭಿಕ ಪಂದ್ಯವಾಗಲಿದೆ. ಇದರ ನಂತರ, ಫೆಬ್ರವರಿ 23 ರಂದು ಪಾಕಿಸ್ತಾನ ವಿರುದ್ಧ ಹಾಗೂ ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ಇರಾದೆಯಲ್ಲಿ ರೋಹಿತ್ ಪಡೆ ಪದೆ. ಇತ್ತ ಟೀಂ ಇಂಡಿಯಾಕ್ಕೆ ಆಗಾಗ್ಗೆ ಆಘಾತ ನೀಡುವುದರಲ್ಲಿ ಹೆಸರುವಾಸಿಯಾಗಿರುವ ಬಾಂಗ್ಲಾದೇಶ ಕೂಡ ಬಲಿಷ್ಠ ಭಾರತ ತಂಡಕ್ಕೆ ಮತ್ತೊಂದು ಸೋಲಿನ ಶಾಕ್ ನೀಡುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
ಇದರ ಮದ್ಯೆ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಭಾರತೀಯ ಕ್ರಿಕೆಟ್ ತಂಡದ ನ್ಯೂ ಜರ್ಸಿ ಅನಾವರಣಗೊಂಡಿದೆ. ಸೋಮವಾರ ಅಂದ್ರೆ ಫೆಬ್ರವರಿ 17 ರಂದು ತಂಡದ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾರ್ದಿಕ್ ಪಾಂಡ್ಯ ಮತ್ತು ಅರ್ಶದೀಪ್ ಸಿಂಗ್, ವಿರಾಟ್ ಕೊಹ್ಲಿ ಹೊಸ ಜರ್ಸಿ ತೊಟ್ಟು ಕಲರಫುಲ್ ಫೋಟೋಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆತಿಥ್ಯವಹಿಸಿರುವ ಪಾಕಿಸ್ತಾನದ ಹೆಸರು ಕೂಡ ಜರ್ಸಿ ಮೇಲೆ ಇರುವುದು ಇನ್ನೊಂದು ವಿಶೇಷ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿತ್ತು. ಆದರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕಿಸ್ತಾನದ ಹೆಸರು ಸಹ ಟೀಮ್ ಇಂಡಿಯಾ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.
ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಮುಂಭಾಗದಲ್ಲಿ ಯಾವುದೇ ಜಾಹೀರಾತು ಕಾಣಿಸಿಕೊಳ್ಳುವುದಿಲ್ಲ. ಐಸಿಸಿ ನಿಯಮದ ಪ್ರಕಾರ, ಜೆರ್ಸಿ ಮುಂಭಾಗದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಬದಲಾಗಿ ಆಯಾ ದೇಶಗಳ ಹೆಸರು ಮಾತ್ರ ಇರಬೇಕು. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಜೆರ್ಸಿ ಮೇಲೆ INDIA ಎಂದು ಮಾತ್ರ ಕಾಣಿಸಿಕೊಳ್ಳಲಿದೆ. ಇನ್ನು ಈ ಜೆರ್ಸಿಯ ಮತ್ತೊಂದು ವೈಶಿಷ್ಟ್ಯವೆಂದರೆ ಭುಜದ ಮೇಲೆ ತ್ರಿವರ್ಣ ಧ್ವಜದ ಚಿತ್ರವಿರುವುದು. ಈ ವಿನ್ಯಾಸವೇ ಭಾರತ ತಂಡದ ಹೊಸ ಜೆರ್ಸಿಯನ್ನು ಭಿನ್ನವಾಗಿಸಿದೆ ಎನ್ನಬಹುದು.