ಬೆಂಗಳೂರು:- ಗ್ಯಾರಂಟಿಯಿಂದ ಸರಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ಎನ್ ರವಿಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ. ಈಗ ಹಾಲಿನ ದರವನ್ನು ಪ್ರತಿ ಲೀಟರಿಗೆ 5 ರೂ. ಹೆಚ್ಚಿಸುವುದಾಗಿ ಸರಕಾರ ಹೇಳುತ್ತಿದೆ. ಯಾವಾಗ ಮಾಡುತ್ತಾರೋ ಗೊತ್ತಿಲ್ಲ; ಕೇಂದ್ರದಿಂದ 5 ಕೆಜಿ ಅಕ್ಕಿ ಸಿಗುತ್ತಿದೆ. ಆದರೆ, ರಾಜ್ಯ ಸರಕಾರದ 5 ಕೆಜಿ ಪಡಿತರ ಅಕ್ಕಿ ಸಂಬಂಧ ಫಲಾನುಭವಿಯ ಖಾತೆಗೆ ಹಣ ವರ್ಗಾಯಿಸಿಲ್ಲ ಎಂದು ಮಾಹಿತಿ ಇರುವುದಾಗಿ ತಿಳಿಸಿದರು.
ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ದುಡಿಯುವವರಿಗೆ ಐದಾರು ತಿಂಗಳಿಂದ ವೇತನ ಕೊಡುತ್ತಿಲ್ಲ; ಮೆಟ್ರೋ ದರ ಹೆಚ್ಚಿಸಿದ್ದು, ಹಾಲು, ವಿದ್ಯುತ್ ದರ ಏರಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಎರಡನೇ ಅವಧಿಯ ಆಡಳಿತ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದೆ ಎಂದು ಟೀಕಿಸಿದರು. ಗ್ಯಾರಂಟಿ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ; ಈ ಸರಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರವಿಕುಮಾರ್ ಆರೋಪಿಸಿದರು.