ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ ಅಂತಾರಾಷ್ಟ್ರೀಯ ಬಜೆಟ್ನಲ್ಲಿ ವ್ಯಾಪಕ ಬದಲಾವಣೆ ತಂದಿದೆ. ಇದರ ಭಾಗವಾಗಿ ವಿದೇಶಿ ನೆರವು ನಿಧಿಯನ್ನು 723 ಮಿಲಿಯನ್ ಡಾಲರ್ ಕಡಿತಗೊಳಿಸಲು ನಿರ್ಧರಿಸಿದ್ದು ಈ ನಿರ್ಧಾರದ ಅಡಿಯಲ್ಲಿ, ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಹಂಚಿಕೆ ಮಾಡಲಾಗುತ್ತಿದ್ದ ಹಣವನ್ನು ನಿಲ್ಲಿಸಲಾಗಿದೆ.
ಭಾರತದಲ್ಲಿ ಮತದಾರರ ಜಾಗೃತಿ ಹೆಚ್ಚಿಸಲು ಉದ್ದೇಶಿಸಲಾದ ಹಣವನ್ನು ರದ್ದುಗೊಳಿಸುವ DOGE ನಿರ್ಧಾರಕ್ಕೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದಾರೆ. Xನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ಮತದಾರರ ಮತದಾನಕ್ಕೆ ಮಿಲಿಯನ್ ಡಾಲರ್ ಹಣ ಬಳಸಿರುವುದು ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಹೊರಗಿನ ಹಸ್ತಕ್ಷೇಪವಾಗಿರುವುದು ಸ್ಪಷ್ಟವಾಗಿದೆ. ಇದರಿಂದ ಯಾರು ಲಾಭ ಪಡೆಯುತ್ತಿದ್ದರು? ಖಂಡಿತವಾಗಿಯೂ ಆಡಳಿತ ಪಕ್ಷವಲ್ಲ! ಎಂದು ಬರೆದಿದ್ದಾರೆ.
ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು 21 ಮಿಲಿಯನ್ ಡಾಲರ್, ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ತಿತ್ವವನ್ನು ಬಲಪಡಿಸಲು 29 ಮಿಲಿಯನ್ ಡಾಲರ್, ಮೊಜಾಂಬಿಕ್ನಲ್ಲಿ ಸ್ವಯಂಪ್ರೇರಿತ ಪುರುಷ ಸುನ್ನತಿ ಕಾರ್ಯಕ್ರಮಕ್ಕೆ 10 ಮಿಲಿಯನ್ ಡಾಲರ್ ಮತ್ತು ನೇಪಾಳದಲ್ಲಿ “ಹಣಕಾಸು ಒಕ್ಕೂಟ” ಮತ್ತು “ಜೀವವೈವಿಧ್ಯ ಸಂರಕ್ಷಣೆ”ಗೆ 39 ಮಿಲಿಯನ್ ಡಾಲರ್ ಸೇರಿದಂತೆ ಹಲವಾರು ದೇಶಗಳಿಗೆ ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ ಸಹಾಯವನ್ನು ನಿರ್ಬಂಧಿಸಿದೆ.