ಹುಬ್ಬಳ್ಳಿ: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಒಂದು ಅದ್ಭುತವೇ ಸರಿ.. ಭಗೀರಥನ ತಪಸ್ಸಿನಿಂದ ಸ್ವರ್ಗದಿಂದ ಧರೆಗಿಳಿದು, ನಮ್ಮ ಭೂಮಿಯನ್ನು ಉದ್ಧರಿಸಿದ ತಾಯಿ ಗಂಗಾ ಮಾತೆ ಹೇಗೆ ತಾಯಿ ಯಮುನೆ ಮತ್ತು ತಾಯಿ ಸರಸ್ವತಿ ಯರನ್ನು ಸೇರುವ ಸಂಗಮದಲ್ಲಿ ನಿರ್ಮಲವಾಗಿ, ರಭಸದಿಂದ ಸಲಿಲವಾಗಿ ಪ್ರಯಾಗದಲ್ಲಿ ಹರಿಯುತ್ತಿದ್ದಾಳೆ. ಸನಾತನ ಸಂಸ್ಕೃತಿಯ ಏಕತೆಯ ಮಹಾಯಜ್ಞ ಕುಂಭಮೇಳದ ಅನುಭವ ಪಡೆದ ನಾನು ಧನ್ಯ ಎಂದು ಸಾಮಾನ್ಯರಂತೆ ಕುಟುಂಬ ಸಮೇತ ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಭಾಗಿಯಾದ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಕೋಟ್ಯಾಂತರ ಭಕ್ತರು ಸೇರುವ ಸ್ಥಳವನ್ನು ವ್ಯವಸ್ಥಿತವಾಗಿ ಯೋಜಿಸುವುದೆಂದರೆ ಅದು ಸಾಹಸವೇ ಸರಿ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಗಿ ಜೀ ಸರ್ಕಾರವು ಕಲ್ಪಿಸಿದ ಅದ್ಭುತ ವ್ಯವಸ್ಥೆಗೆ ಅನಂತಾನಂತ ಧನ್ಯವಾದಗಳು ಎಂದು ಕೃತಜ್ಞತೆ ತಿಳಿಸಿದ್ದಾರೆ.
ಸರಿಯಾದ ಲೈನಿಂಗ್ ಮಾಡಿರುವ ಕಸದ ಬುಟ್ಟಿಯಿಂದ ಹಿಡಿದು, ಪ್ರತಿ 800 ಮೀಟರ್ ಗೆ ಪುರುಷರಿಗೆ ನೀಲಿ ಬಣ್ಣದ ಹಾಗೂ ಮಹಿಳೆಯರಿಗೆ ಗುಲಾಬಿ ಬಣ್ಣದ ಸ್ವಚ್ಛ ಶೌಚಾಲಯ, ಸಾತ್ವಿಕ ಆಹಾರ, ಪ್ರತಿ 1ಕಿ.ಮೀ ಗೆ ಇರುವ ಕುಡಿಯುವ ನೀರಿನವರೆಗೂ, ಪಾತ್ರೆ ತೊಳೆಯಲು ಹಾಗೂ ಚಿಕ್ಕಪುಟ್ಟ ಅಂಗಡಿಗಳಿಗೆ ಉಪಯೋಗಿಸಲು ಪ್ರತಿ 500 ಮೀಟರ್ ಗೆ ನಳ, ತಾತ್ಕಾಲಿಕ ಫೋನ್ ಸಿಗ್ನಲ್ ಟವರ್, ಅಗ್ನಿಶಾಮಕ ದಳ, ವಾಟರ್ ಆಂಬುಲೆನ್ಸ್ ಗಳವರೆಗೂ ಮಾಡಿರುವ ಅಚ್ಚುಕಟ್ಟಾದ ನಿರ್ವಹಣೆಯು ಸಮರ್ಥ ನಾಯಕತ್ವಕ್ಕೆ ನಿದರ್ಶನದಂತಿದೆ. ಅಲ್ಲಿರುವ ಜ್ಯೋತಿರ್ಲಿಂಗ ದೇವಸ್ಥಾನದ ಹೊರಗಡೆಯ ಇನ್ಫೋಗ್ರಾಫಿಕ್ ಗಳು, ಎ.ಐ ಚಾಲಿತ ಕ್ಯೂ ಆರ್ ಕೋಡ್ ಗಳು ನವಭಾರತಕ್ಕೆ ನಾಂದಿ ಹಾಡಿದೆ. ಜಾತಿ-ಧರ್ಮ, ಬಡವ ಶ್ರೀಮಂತ, ಮೇಲು ಕೀಳು ಎಂಬ ಬೇಧವಿಲ್ಲದೆ ಗಂಗೆಯಲ್ಲಿ ಮಿಂದೆದ್ದ ನಾವೊಂದೆಡೆಯಾದರೆ, ಸನಾತನ ಮೌಲ್ಯಗಳಿಗೆ ಆಕರ್ಷಿತರಾಗಿ ಪುಣ್ಯಭೂಮಿಗೆ ಬಂದಿರುವ ವಿದೇಶಿಗರು ಇನ್ನೊಂದೆಡೆ! ಒಟ್ಟಿನಲ್ಲಿ ಮಹಾಕುಂಭಮೇಳ ಐಕ್ಯತೆಯ ಮಹಾಯಜ್ಞ ಎಂದಿದ್ದಾರೆ