ಬೆಂಗಳೂರು: ನಾನು ವಿಶ್ರಾಂತಿಯಲ್ಲಿದ್ದೇನೆ, ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸದ್ಯ ನಾನು ವಿಶ್ರಾಂತಿಯಲ್ಲಿದ್ದೇನೆ. ಹಾಗಾಗಿ ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ . ಜನ ರೆಸ್ಟ್ ಕೊಟ್ಟಿದ್ದಾರೆ, ಹಾಗಾಗಿ ರೆಸ್ಟ್ನಲ್ಲಿದ್ದೇನೆ ಎಂದರು.
ಕೇಂದ್ರ ತೆರಿಗೆ ತಾರತಮ್ಯ ಧೋರಣೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳುಮಾಡುವ ಕೆಟ್ಟ ಸಂಸ್ಕ್ರತಿ ಇದಾಗಿದೆ. ಕೇಂದ್ರ ನಮ್ಮ ತೆರಿಗೆ ಹಣವನ್ನು ಕೊಡ್ತಿಲ್ಲ. ದಕ್ಷಿಣದಲ್ಲಿ ಎಲ್ಲವೂ ಬಿಜೆಪಿಯೇತರ ರಾಜ್ಯಗಳೇ. ದಕ್ಷಿಣ ಭಾರತಕ್ಕೆ ಅನ್ಯಾಯವಾಗ್ತಿದೆ.ಬೆಂಗಳೂರಿಗೆ ಕೆಟ್ಟ ಹೆಸರು ತರುವ ಹುನ್ನಾರವಿದೆ ಎಂದು ವಾಗ್ದಾಳಿ ನಡೆಸಿದರು.
ಮೆಟ್ರೋ ದರ ಏರಿಕೆ ವಿಚಾರವಾಗಿ ಇದೇ ವೇಳೆ ಮಾತನಾಡಿ, ಮೆಟ್ರೋ ನಿರ್ವಹಣೆ ಕೇಂದ್ರದ ಕೈನಲ್ಲಿದೆ. ರಾಜ್ಯ ಸರ್ಕಾರದ ಕೈನಲ್ಲಿ ಏನಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬಹುದಷ್ಟೇ. ಮೆಟ್ರೋ ಬೋರ್ಡ್ ಶಿಫಾರಸ್ಸಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ ಎಂದರು.
ಮೆಟ್ರೋ ದರ ಏರಿಕೆ ವಿಚಾರವಾಗಿ ಸಂಸದರ ಹೇಳಿಕೆಯನ್ನು ನಾನು ನೋಡಿದ್ದೇನೆ. ದರ ಇಳಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೇ ಸಚಿವರ ಮುಂದೆ ಬೇಡಿಕೆ ಇಡಲಿ. ಮೆಟ್ರೋಗೆ ಕೇಂದ್ರದ ಸಹಕಾರ ಹೆಚ್ಚಿಸಿ. ನಮ್ಮ ತೆರಿಗೆ ಪಾಲಿನ ಹಣವನ್ನ ಕೊಡಿಸಿ ಎಂದು ಆಗ್ರಹಿಸಿದರು.