ಬೆಂಗಳೂರು: ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಖಂಡಿಸಿ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಯಿತು. ಪರಿಷತ್ ಶಾಸಕ ಟಿಎ ಶರವಣ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ದೇಶದಲ್ಲಿಯೇ ಬೆಂಗಳೂರಲ್ಲಿ ದುಬಾರಿಯಾಗಿರುವ ಮೆಟ್ರೋ ರೈಲು ಟಿಕೆಟ್ ದರವನ್ನು ಕಡಿಮೆ ಮಾಡುವಂತೆ ಒತ್ತಾಯಿಸಲಾಯಿತು.
ನಂತರ ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು, ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ದರ ಏರಿಕೆ ಜನ ಸಾಮಾನ್ಯರ ಬದುಕಿನ ಮೇಲೆ ದಮನಕಾರಿ ಆಗಿದೆ. ಇದು ನಮ್ಮ ಮೆಟ್ರೋ ಹೆಸರಿಗೆ ಮಾತ್ರ ಆಗಿದ್ದು, ಪ್ರಯಾಣ ದರ ಏರಿಕೆ ನೀತಿ ನೋಡಿದರೆ ನಿಮ್ಮ ಮೆಟ್ರೋ ಎಂದು ಜನ ಮಾತಾಡುವಂತಾಗಿದೆ.ನಮ್ಮ ಮೆಟ್ರೋ ಯಶಸ್ವಿ ಪ್ರಯತ್ನ ಹೌದು. ಆದರೆ ಇದರಲ್ಲಿ ಪ್ರಯಾಣ ಮಾಡುವ ಜನರಿಗೆ ನಮ್ಮ ಪ್ರಯಾಣಿಕರು ಎನ್ನುವ ಭಾವನೆಯೇ ಇದರ ಆಡಳಿತ ಮಂಡಳಿ ಅಂದರೆ ಬಿಎಂ ಆರ್ ಸಿ ಎಲ್ ಗೆ ಇಲ್ಲವಾಗಿದೆ.ದರ ಏರಿಕೆ ನೋಡಿದರೆ ಅದು ಮಧ್ಯಮ ವರ್ಗದ ಮೇಲೆ ಬರೆ ಹಾಕಿದ ರೀತಿ ಇದೆ ಎಂದು ಕಿಡಿಕಾರಿದರು.
ಶೇಕಡಾ 71ರಷ್ಟು ಹೆಚ್ಚಳ ಅಂದರೆ ಲೆಕ್ಕ ಹಾಕಿ.ಅದಕ್ಕೇನು ಇತಿಮಿತಿ ಅನ್ನುವುದೇ ಇಲ್ಲವೇ. ಅದರಲ್ಲೂ ನ್ಯಾಯಮೂರ್ತಿ ನೇತೃತ್ವದ ಸಮಿತಿಯ ಶಿಫಾರಸು ಎನ್ನುವ ಕಾರಣವನ್ನೂ ನೀಡಲಾಗಿದೆ.ಈ ದರ ಏರಿಕೆ ಅವೈಜ್ಞಾನಿಕ. ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯ ಶಿಫಾರಸನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ.ಜನ ಸಾಮಾನ್ಯರ ಬದುಕಿನ ಮೇಲೆ ಪ್ರಹಾರ ನಡೆಸುವ ಈ ದರ ಏರಿಕೆಯನ್ನು ವಾಪಸ್ ಪಡೆಯಬೇಕು. ಇಡೀ ದರ ಏರಿಕೆಯನ್ನು ರದ್ದು ಮಾಡಬೇಕು.ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅಹವಾಲು ಕೇಳಿದ ಬಳಿಕವೇ ಅದನ್ನು ಪರಿಗಣಿಸಿ ದರ ಏರಿಕೆ ಜಾರಿ ಮಾಡುವ ಪದ್ಧತಿ ಬರಲಿ.ದರ ಏರಿಕೆ ಸಮಿತಿಯಲ್ಲಿ ಚುನಾಯಿತ ಪ್ರತಿನಿಧಿಗಳು, ಪ್ರಯಾಣಿಕರ ಪ್ರತಿನಿಧಿಗಳು ಇರುವಂತಹ ಪದ್ಧತಿ ಜಾರಿಗೆ ಬರಲಿ ಎಂದರು.
ಇನ್ನೂ ಮೆಟ್ರೋ ಇದು ಲಾಭ ಮಾಡುವ ಉದ್ದೇಶದ ಸಂಸ್ಥೆಯಲ್ಲ ಎನ್ನುವುದನ್ನು ಮನಗಾಣಬೇಕು. ಈ ಅವೈಜ್ಞಾನಿಕ ಏರಿಕೆಯಿಂದ ಮೆಟ್ರೋದಲ್ಲಿ ದಿನ ನಿತ್ಯ ಓಡಾಡುವವರ ಸಂಖ್ಯೆ ಇಳಿಕೆ ಆಗಿದೆ. ಹೀಗೆ ದರ ಏರಿಕೆ ಮಾಡಿದರೆ. ಸಂಸ್ಥೆ ನಷ್ಟಕ್ಕೆ ಒಳಗಾಗಿ ಮುಚ್ಚುವ ಪರಿಸ್ಥಿತಿ ಬರುತ್ತೆ. ಇದು ಸಾಮಾನ್ಯ ಜನರಿಗೆ ಸೇವೆ ನೀಡಬೇಕೆಂಬ ಲಾಭ, ನಷ್ಟ ಸರಿದೂಗಿಸಿ ನಡೆಯಬೇಕಾದ ಸಂಸ್ಥೆ.
ಇದನ್ನು ಅರಿತು ತತಕ್ಷಣ ಮೆಟ್ರೋ ಏರಿಸಿರುವ ಪ್ರಯಾಣದರಗಳನ್ನು ರದ್ದು ಮಾಡಬೇಕು. ಪ್ರಯಾಣಿಕರ ನೆರವಿಗೆ ಬರಬೇಕು. ದರ ಏರಿಕೆ ಸಮಿತಿಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು, ಪ್ರಯಾಣಿಕರ ಪ್ರತಿನಿಧಿಗಳನ್ನು ಸದಸ್ಯರಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಈ ಪ್ರತಿಭಟನೆಯಲ್ಲಿ ಪರಿಷತ್ ಶಾಸಕ ಟಿಎ ಶರವಣ ಅವರು, ಬೆಂಗಳೂರು ನಗರ ಅಧ್ಯಕ್ಷರಾದ ರಮೇಶ ಗೌಡ, ಪಕ್ಷದ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಬಿಬಿಎಂಪಿ ಮಾಜಿ ಸದಸ್ಯರು ಭಾಗಿಯಾಗಿದ್ದರು.