ನಮ್ಮ ಮೆಟ್ರೋ ದರ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜನರ ಆಕ್ರೋಶದ ಬಳಿಕ ಎಚ್ಚೆತ್ತುಕೊಂಡ ಬಿಎಂಆರ್ ಸಿಎಲ್ ಇದೀಗ ದರ ಕಡಿತಗೊಳಿಸಿದ್ದು ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಯಾಣಿಕರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಬಿಎಂಆರ್ಸಿಎಲ್, ಶೇ 90 ರಿಂದ 100 ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ದರ ತುಸು ಇಳಿಕೆ ಮಾಡಿದೆ. ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಬಿಎಂಆರ್ಸಿಎಲ್ ಗುರುವಾರ ತಿಳಿಸಿತ್ತು. ಆದರೆ, ಈವರಗೆ ಪರಿಷ್ಕೃತ ದರ ಪಟ್ಟಿ ಮೆಟ್ರೋದ ಅಧಿಕೃತ ವೆಬ್ಸೈಟ್ನಲ್ಲಾಗಲೀ ಎಕ್ಸ್ ತಾಣದಲ್ಲಾಗಲೀ ಪ್ರಕಟವಾಗಿಲ್ಲ. ಆದರೆ ಇಂದಿನಿಂದ ಪ್ರಯಾಣ ದರದಲ್ಲಿ ತುಸು ಇಳಿಕೆ ಜಾರಿಯಾಗಿದೆ.
ಮೆಟ್ರೋ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದ ಬೆನ್ನಲ್ಲೇ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆ ಮಾಡಲಾಗುವುದು ಎಂದಿದ್ದರು.
ಮೆಜೆಸ್ಟಿಕ್ನಿಂದ ವೈಟ್ಫಿಲ್ಡ್ಗೆ 90 ರೂ. ಇದ್ದ ದರ ಈಗ 80 ರೂ. ಆಗಿದೆ. ಮೆಜೆಸ್ಟಿಕ್ನಿಂದ ಚಲ್ಲಘಟ್ಟಕ್ಕೆ 70 ರೂ. ಇದ್ದ ದರ ಈಗ 60 ರೂ. ಆಗಿದೆ. ಮೆಜೆಸ್ಟಿಕ್ನಿಂದ ವಿಧಾನಸೌಧಕ್ಕೆ 20 ರೂ. ಇದ್ದ ದರ ಈಗ 10 ರೂ. ಆಗಿದೆ. ಮೆಜೆಸ್ಟಿಕ್ನಿಂದ ಕಬ್ಬನ್ಪಾರ್ಕ್ಗೆ ಇದ್ದ 20 ರೂ. ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿಗೆ 60 ಇದ್ದ ದರ ಈಗ 50 ರೂ. ಆಗಿದೆ. ಮೆಜೆಸ್ಟಿಕ್ನಿಂದ ರೇಷ್ಮೆ ಸಂಸ್ಥೆಗೆ ಇದ್ದ 70 ರೂ. ದರ ಈಗ 60 ರೂ. ಆಗಿದೆ. ಜಾಲಹಳ್ಳಿಯಿಂದ ರೇಷ್ಮೆ ಸಂಸ್ಥೆಗೆ 90 ರೂ. ದರದಲ್ಲಿ ಬದಲಾವಣೆ ಇಲ್ಲ. ನಮ್ಮ ಮೆಟ್ರೋ ಕನಿಷ್ಠ, ಗರಿಷ್ಠ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.