ಇದೇ ಮಾರ್ಚ್ ನಿಂದ ಪ್ರಾರಂಭವಾಗಲಿರುವ IPL 2025ನೇ ಆವೃತ್ತಿಯು ಪ್ರತಿ ದಿನವೂ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ. ಈ ಆವೃತ್ತಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಆರ್ಸಿಬಿ ತಂಡದ ನಾಯಕನನ್ನಾಗಿ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರೀ ನಿರೀಕ್ಷೆಯಿದ್ದ Rcb ಕ್ಯಾಪ್ಟನ್ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಹೆಸರೇ ಕೇಳಿ ಬಂದಿತ್ತು. ಆದರೆ ವಿರಾಟ್ ತಮ್ಮ ಆಪ್ತನಿಗೆ ಪಟ್ಟಾಭಿಷೇಕ ಮಾಡಿ ತಂಡ ಹಾಗೂ ಫ್ರಾಂಚೈಸಿಯ ಗೆಲುವಿಗೆ ಪಣ ತೊಟ್ಟಿದ್ದಾರೆ.
ಟೀಂ ಇಂಡಿಯಾದವರೇ ಆದ ರಜತ್ ಮನೋಹರ್ ಪಾಟಿದಾರ್ ಆರ್ ಸಿಬಿ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಇದೀಗ ತಾನೇ ಘೋಷಣೆ ಮಾಡಿದೆ.
ಸ್ವತಃ ವಿರಾಟ್ ಕೊಹ್ಲಿಯೇ ವಿಡಿಯೋ ಮೂಲಕ ಹೊಸ ನಾಯಕನ ಹೆಸರು ಘೋಷಣೆ ಮಾಡಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಹಿಂದೆ ನಾವು ಯಾವತ್ತೂ ಇರುತ್ತೇವೆ ಎಂದು ಕೊಹ್ಲಿ ಬೆಂಬಲ ನೀಡಿದ್ದಾರೆ.
ಆರ್ ಸಿಬಿ ಹೊಸ ನಾಯಕನ ಘೋಷಣೆ ಮಾಡಲಿದೆ ಎಂದಾಗ ಹಲವರು ವಿರಾಟ್ ಕೊಹ್ಲಿ ನಾಯಕನಾಗಬಹುದು ಎಂದುಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿಸಿ ಯುವ ಆಟಗಾರನನ್ನು ಆರ್ ಸಿಬಿ ನಾಯಕನಾಗಿ ಘೋಷಣೆ ಮಾಡಿದೆ.
ವಿರಾಟ್ ಹೇಳಿದ್ದೇನು?
ರಜತ್ ಪಾಟಿದಾರ್ Rcb ನಾಯಕನಾಗಿ ಘೋಷಣೆಯಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವ ವಿರಾಟ್, ಕ್ಯಾಪ್ಟನ್ ರಜತ್ ಪಾಟಿದಾರ್ ಆಯ್ಕೆಯನ್ನು ಸಮರ್ಥಿಸಿಕೊಂಡು ತುಂಬು ಹೃದಯದಿಂದ ಹಾರೈಸಿದ್ದಾರೆ.
ಆರ್ಸಿಬಿಗಾಗಿ ಆಡಿರುವ ರಜತ್ ಪಾಟಿದಾರ್ ನಾಯಕ ಸ್ಥಾನಕ್ಕೆ ಅರ್ಹನಾಗಿದ್ದಾನೆ. ನಾನು ಮತ್ತು ಆರ್ಸಿಬಿ ಫ್ರಾಂಚೈಸಿ ಸದಾ ರಜತ್ ಪಾಟೀದಾರ್ ಅವರನ್ನು ಬೆಂಬಲಿಸಲಿದ್ದೇವೆ. ಬಹಳ ವರ್ಷಗಳ ಬಳಿಕ ಅತಿದೊಡ್ಡ ಜವಾಬ್ದಾರಿ ಪಾಟಿದಾರ್ ಗೆ ಒಲಿದು ಬಂದಿದೆ. ರಜತ್ ಪಾಟಿದಾರ್ ಅವರನ್ನು ನಾನು ಬಹಳ ವರ್ಷಗಳಿಂದಲೂ ನೋಡಿದ್ದೇನೆ. ಭಾರತ ತಂಡಕ್ಕಾಗಿ ಆಟ ಆಡುವಾಗಲೂ ಗಮನಿಸಿದ್ದೇನೆ. ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬಲ್ಲ ಚತುರತೆ ರಜತ್ ಪಾಟಿದಾರ್ ಬಳಿ ಇದೆ. ಆರ್ಸಿಬಿ ತಂಡ ಹಾಗೂ ಫ್ರಾಂಚೈಸಿ ಬಹಳ ಮುಖ್ಯವಾದದ್ದು. ರಜತ್ ಪಾಟಿದಾರ್ಗೆ ನಾನು ಶುಭಾಶಯ ತಿಳಿಸುತ್ತಾ ಆರ್ಸಿಬಿ ಅಭಿಮಾನಿಗಳು ಹೊಸ ಕ್ಯಾಪ್ಟನ್ಗೆ ಬೆಂಬಲಿಸಿ ಎಂದು ವಿರಾಟ್ ಕೊಹ್ಲಿ ಕೇಳಿಕೊಂಡಿದ್ದಾರೆ