2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯು ಮಾರ್ಚ್ನಲ್ಲಿ ಪ್ರಾರಂಭವಾಗಲಿದೆ. ಇದರೊಂದಿಗೆ ಅಭಿಮಾನಿಗಳಲ್ಲಿ ದಿನೇ ದಿನೇ ಉತ್ಸಾಹ ಹೆಚ್ಚುತ್ತಿದೆ. ಆದಾಗ್ಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಋತುವಿನ ಮೊದಲು ತಮ್ಮ ಹೊಸ ನಾಯಕನನ್ನು ಘೋಷಿಸಿದೆ. ಈ ಬಾರಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್ಸಿಬಿ ತಂಡ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಈ ಹಿಂದೆ ಆರ್ಸಿಬಿ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ನೇಮಕವಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ತಂಡದ ಸಾರಥ್ಯವನ್ನು ಪಾಟಿದಾರ್ಗೆ ವಹಿಸಲಾಗಿದೆ.
ರಜತ್ ಪಾಟಿದಾರ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ 2021 ರಿಂದ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 31 ವರ್ಷದ ಪಾಟಿದಾರ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಫಾಫ್ ಡುಪ್ಲೆಸಿಸ್ ಕಾಣಿಸಿಕೊಂಡಿದ್ದರು. 2022 ರಿಂದ 2024 ರವರೆಗೆ ಡುಪ್ಲೆಸಿಸ್ ಮುಂದಾಳತ್ವದಲ್ಲಿ ಆರ್ಸಿಬಿ ಕಣಕ್ಕಿಳಿದಿತ್ತು. ಆದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು.
ಇನ್ನು ಮೆಗಾ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ ನಾಯಕರಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವರನ್ನು ನಾಯಕರಾಗಿ ನೇಮಕ ಮಾಡಲಾಗಿದೆ.