ಬೆಂಗಳೂರು: ಸಿಎಂ ಆಪ್ತ ಬಣ ಹಾಗೂ ದಲಿತ ನಾಯಕರ ಒತ್ತಡಕ್ಕೆ ಹೈಕಮಾಂಡ್ ಕೊನೆಗೂ ಮಣೆ ಹಾಕಿದೆ.ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಹುತೇಕ ಫಿಕ್ಸ್ ಆಗಿದೆ.ಖುದ್ದು ಮಲ್ಲಿಕಾರ್ಜುನ ಖರ್ಗೆಯವ್ರೇ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.ಅಧ್ಯಕ್ಷರ ಬದಲಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಲ್ಲಿ ಮಿಂಚಿನ ಚಟುವಟಿಕೆಗಳು ಶುರುವಾಗಿದೆ.. ಯೆಸ್… ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಅನ್ನೋ ಅಹಿಂದ ನಾಯಕರ ಕನಸು ನನಸಾಗೋ ಸಮಯ ಹತ್ತಿರವಾಗಿದೆ.
ಡಿ.ಕೆ ಶಿವಕುಮಾರ್ ಅವ್ರನ್ನ ಕೆಳಗಿಳಿಸಿ ಬೇರೊಬ್ಬ ಪ್ರಭಾವಿ ನಾಯಕನಿಗೆ ಪಟ್ಟಾಭಿಷೇಕ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿದೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವ್ರೇ ಸುಳಿವು ನೀಡಿದ್ದಾರೆ.. ಒಡಿಶಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೀನಿ.ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ.ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತೆ.ಸ್ಪೆಸಿಫಿಕ್ ಆಗಿ ಏನೂ ಹೇಳೋಕೆ ಆಗಲ್ಲ.ಆದ್ರೆ ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಆಗುತ್ತೆ ಅಂತಾ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ..
ಎಐಸಿಸಿ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಹಲವಾರು ನಾಯಕರು ಕಣ್ಣಾಕಿದ್ದಾರೆ.ಸಿಎಂ ಆಗಲು ಈಗಿನಿಂದಲೇ ತುದಿಗಾಲಲ್ಲಿ ನಿಂತಿರುವ ಸಚಿವ ಸತೀಶ್ ಜಾರಕಿಹೊಳಿ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ನಿನ್ನೆ ದೆಹಲಿಗೆ ಹೋಗಿ ರಣತಂತ್ರ ರೂಪಿಸಿಕೊಂಡು ಬಂದಿದ್ದಾರೆ.ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ಮಂತ್ರಿ ಸ್ಥಾನ ಬಿಡ್ತೇನೆ ಎಂದು ಡಿ.ಕೆ ಶಿವಕುಮಾರ್ ವಿರುದ್ದ ನೇರವಾಗಿ ಸೆಡ್ಡು ಹೊಡೆದಿರೋ ಕೆ.ಎನ್ ರಾಜಣ್ಣ ಕೂಡ ತೀವ್ರ ಲಾಬಿ ನಡೆಸ್ತಿದ್ದಾರೆ.ದೆಹಲಿಗೆ ಹೋಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯವ್ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆ, ಎಂಎಲ್ ಸಿ ಅಭ್ಯರ್ಥಿ ಆಯ್ಕೆ ಬಗ್ಗೆ ಗಂಭೀರ ಮಾತುಕತೆ ನಡೆಸಿದ್ದಾರೆ.ಲಿಂಗಾಯತ ಸಮುದಾಯದಿಂದ ಎಂ.ಬಿ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಶತಪ್ರಯತ್ನ ನಡೆಸ್ತಿದ್ದಾರೆ.ಆದ್ರೆ, ಡಿ.ಕೆ ಶಿವಕುಮಾರ್ ಮಾತ್ರ ಸೈಲೆಂಟ್ ಆಗಿಯೇ ಗೇಮ್ ಪ್ಲ್ಯಾನ್ ಮಾಡ್ತಿದ್ದಾರೆ.ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಸಹೋದರ ಡಿ.ಕೆ ಸುರೇಶ್ ಕೂರಿಸಲು ಚದುರಂಗದಾಟ ಶುರು ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ತಮ್ಮವರೇ ಇದ್ರೆ, ಸಿಎಂ ಬದಲಾವಣೆಗೆ ಪಕ್ಷದಿಂದಲೇ ಒತ್ತಡ ಹಾಕಬಹುದು. ಸಿಎಂ ಆಗಲು ಎದುರಾಗಿರೋ ಅಡೆತಡೆಗಳನ್ನ ನಿಭಾಯಿಸಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದಾರೆ.
ಖರ್ಗೆ ಸ್ಟೇಟ್ ಮೆಂಟ್ ಬಗ್ಗೆ ಪ್ರತಿಕ್ರಿಯಿಸಿರೋ ಡಿ.ಕೆ ಶಿವಕುಮಾರ್, ನನಗೆ ಗೊತ್ತಿಲ್ಲ ಅಂತಿದ್ದಾರೆ.. ಕೆ.ಎನ್ ರಾಜಣ್ಣ ದೆಹಲಿ ಪ್ರವಾಸ ಬಗ್ಗೆ ಮಾತನಾಡಿ, ದೊಡ್ಡವರ ಬಗ್ಗೆ ನಾನು ಮಾತಾಡಲ್ಲ.. ಅವ್ರೆಲ್ಲಾ ಸೀನಿಯರ್ಸ್.. ನಾನು ಕಾರ್ಯಕರ್ತ ಅಂತಾ ತಿರುಗೇಟು ನೀಡಿದ್ರು.. ಇನ್ನು ಮಲ್ಲಿಕಾರ್ಜುನ ಖರ್ಗೆ ಹೇಳಿದ್ಮೇಲೆ ಮುಗೀತು.. ನಮ್ಮದೇನೂ ಇಲ್ಲ ಅಂತಾ ದೆಹಲಿಯಿಂದ ವಾಪಸ್ ಆದ ಬಳಿಕ ಸತೀಶ್ ಜಾರಕಿಹೊಳಿ ಹೇಳಿದ್ರು.. ನಾವು ದೆಹಲಿಗೆ ಹೋಗಿದ್ದು ಬೇರೆ ಕಾರಣಕ್ಕೆ. ಯಾರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಅಂತ ಚರ್ಚೆ ಆಗಬೇಕು. ಸಿಎಂ, ಡಿಸಿಎಂ ಇದ್ದಾರೆ. ಅವ್ರನ್ನ ಕರೆದು ಕೇಳ್ತಾರೆ.. ಯಾವ ಸಮುದಾಯಕ್ಕೆ ಕೊಡ್ತಾರೆ ಅನ್ನೋ ಚರ್ಚೆ ಆಗಬೇಕು ಅಂದ್ರು.
ದಲಿತ ಸಮಾವೇಶ ವಿಚಾರವನ್ನ ರಾಜಣ್ಣ ಅವರನ್ನೇ ಕೇಳ್ಬೇಕು.ಅವರ ಹೇಳಿಕೆಗೆ ನಾನೇನೆ ಉತ್ತರ ಕೊಡಬೇಕು ಅಂತಾ ಗೃಹ ಸಚಿವ ಪರಮೇಶ್ವರ್ ಗರಂ ಆದ್ರು. ಅವರ ಹೇಳಿಕೆಗೆ ನಮ್ಮ ಸ್ಟೇಟ್ಮೆಂಟ್ ಕೇಳ್ತೀರಿ. ಅದಕ್ಕೆ ನಿಮ್ಮದು ಒಂದು ಸೇರಿಸ್ತೀರಿ.. ದೆಹಲಿಗೆ ಹೋದರೆ ಎಲ್ಲರಿಗೂ ಗೊತ್ತಾಗುತ್ತೆ ಅಂತಾ ಸಿಡಿಮಿಡಿಯಾದ್ರು.. ಒಟ್ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ, ಪರಮೇಶ್ವರ್, ಮಹದೇವಪ್ಪ ಒತ್ತಡಕ್ಕೆ ಹೈಕಮಾಂಡ್ ಮಣೆ ಹಾಕಿದಂತಿದೆ. ಡಿಕೆಶಿಗೆ ಸಿಎಂ ಗಾದಿ ತಪ್ಪಿಸಲು ಹೂಡಿದ್ದ ರಣತಂತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ. ದಲಿತ ನಾಯಕರ ಸಭೆಗಳಿಗೆ ಬ್ರೇಕ್ ಹಾಕಿದ್ದಕ್ಕೆ ಡಿಕೆಶಿ, ಸುರ್ಜೇವಾಲ ವಿರುದ್ದ ಈ ನಾಯಕರು ಕೆರಳಿ ಕೆಂಡವಾಗಿ, ಉಸ್ತುವಾರಿ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ.ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಶೀಘ್ರದಲ್ಲೇ ಆಗಬೇಕು ಅಂತಾ ಡಿಮ್ಯಾಂಡ್ ಮಾಡಿದ್ರು. ಈಗ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಂಥ ಮಹತ್ವದ ತೀರ್ಮಾನಕ್ಕೆ ಬಂದಿದೆ.ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಾಕಿದವ್ರೆಲ್ಲಾ ತೀವ್ರ ಲಾಭಿ ಶುರು ಮಾಡಿದ್ದಾರೆ.