ಬೆಂಗಳೂರು- ಮೈಕ್ರೋಫೈನಾನ್ಸ್ ದಬ್ಬಾಳಿಕೆ ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಿರು ಸಾಲ ಮತ್ತು ಸಣ್ಣ ಸಾಲ ( ಒತ್ತಡ ತಂತ್ರಗಳ ನಿಷೇಧ) 2025 ಸುಗ್ರೀವಾಜ್ಞೆಯ ಕರಡಿಗೆ ಕೆಲವು ನಿಬಂಧನೆಗಳನ್ನು ವಿಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ. ಸಹಿ ಹಾಕಿದ್ದಾರೆ. ಇದರಿಂದಾಗಿ ಅಧಿಕೃತವಾಗಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿಗೊಂಡಂತೆ ಆಗಿದೆ.
ಎಚ್ಚರಿಕೆ (ನಿಬಂಧನೆ) ಒಳಪಟ್ಟು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿರುವ ರಾಜ್ಯಪಾಲರು, ಆರ್ ಬಿಐ ಅಡಿ ನೋಂದಾಯಿತ,ಸಹಕಾರಿ,ಸಣ್ಣ ಹಣಕಾಸು ಸಂಸ್ಥೆಗಳಿಗೆ ವ್ಯಾಪಾರ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿದಾತರು ಈ ಸುಗ್ರೀವಾಜ್ಞೆಯಿಂದ ಅವರ ಸಾಲ,ಹಾಗೂ ಬಡ್ಡಿ ವಸೂಲಾತಿಗೆ ಅಡ್ಡಿಯಾಗಬಹುದು ಮತ್ತು ಕಾನೂನು ಹೋರಾಟಕ್ಕೆ ಆಸ್ಪದ ಕಲ್ಪಿಸಬಹುದು.
ಸಂವಿಧಾನದ ಕಲಂ 19 ಮತ್ತು 32 ರಅಡಿ ನೈಸರ್ಗಿಕ ನ್ಯಾಯ ಪಡೆಯಲು (Natural Justice) ಅವಕಾಶವಿದೆ.ಹೀಗಾಗಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಷರತ್ತಿನೊಂದಿಗೆ ಸಹಿ ಹಾಕಿದ್ದಾರೆ. ಆದಷ್ಟು ಶೀಘ್ರವಾಗಿ ವಿಧಾನ ಮಂಡಲದಲ್ಲಿ ವಿಧೇಯಕ ಮಂಡಿಸಿ ಸಮಗ್ರವಾಗಿ ಚೆರ್ಚಿಸಿ ವಿಧೇಯಕ ತರುವಂತೆಯೂ ಸೂಚಿಸಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿಗೊಳಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅದರಂತೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು.
ರಾಜ್ಯಪಾಲರು ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು. ಈ ಮಸೂದೆಯ ಅಂಶಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆಯ ಜೊತೆಗೆ ರಾಜ್ಯಪಾಲರಿಗೆ ಅಂಕಿತಕ್ಕೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಕಾಯ್ದೆಯನ್ನು ಮರು ರವಾನೆ ಮಾಡಲಾಗಿತ್ತು. ರಾಜ್ಯ ಸರ್ಕಾರದಿಂದ ರಾಜ್ಯಪಾಲರು ವಾಪಾಸ್ಸು ಕಳುಹಿಸಿದ್ದಂತ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸುಗ್ರೀವಾಜ್ಞೆಗೆ ಎಲ್ಲಾ ಆಕ್ಷೇಪಣೆಗಳಿಗೆ ಕಾನೂನು ಇಲಾಖೆಯಿಂದ ಸೂಕ್ತ ಸ್ಪಷ್ಟೀಕರಣ ನೀಡಿ ಸೋಮವಾರ ರಾಜಭವನಕ್ಕೆ ಮತ್ತೆ ಕಳುಹಿಸಲಾಗಿತ್ತು.
ರಾಜ್ಯ ಸರ್ಕಾರ ಕಳುಹಿಸಿರುವ ರಾಜ್ಯಪಾಲರು ಸುಗ್ರೀವಾಗ್ಞೆಗೆ ಸಹಿ ಮಾಡಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕರ್ತವ್ಯಧಿಕಾರಿ ಪ್ರಭು ಶಂಕರ್ ತಿಳಿಸಿದ್ದಾರೆ. ಸುಗ್ರೀವಾಜ್ಞೆಯ ಕರಡನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದ ರಾಜ್ಯಪಾಲರು ಇದು ರಾಜ್ಯದ ವ್ಯವಹಾರದ ನಿರೀಕ್ಷೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅದು ಹೇಳಿದ್ದರು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಸುಗ್ರೀವಾಜ್ಞೆಯನ್ನು ಮಂಡಿಸುವಂತೆ ಗೆಹ್ಲೋಟ್ ಸರ್ಕಾರಕ್ಕೆ ಸಲಹೆ ನೀಡಿದ್ದರು. ದಂಡ ಮತ್ತು ಶಿಕ್ಷೆ ಸೇರಿದಂತೆ ಕೆಲವು ವಿಷಯಗಳಿಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಹಿಂದಿರುಗಿಸುತ್ತಾ ಆರು ಅಂಶಗಳಲ್ಲಿ ಹಲವು ವಿಯಷಗಳನ್ನು ಉಲ್ಲೇಖಿಸಿದ್ದರುಮ. ಅವಸರದಲ್ಲಿ ಸುಗ್ರೀವಾಜ್ಞೆ ತರುವ ಬದಲು ಮಾರ್ಚ್ ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಇದನ್ನು ಮಂಡಿಸುವಂತೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಸುದೀರ್ಘ ಸ್ಪಷ್ಟನೆಯನ್ನು ಕಾನೂನು ಇಲಾಖೆ ಸಿದ್ಧಪಡಿಸಿ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದು. ಇದನ್ನು ಮುಖ್ಯಮಂತ್ರಿಗಳು ಪರಾಮರ್ಶಿಸಿ ಅಂತಿಮಗೊಳಿಸಿದ ಬಳಿಕ ಸ್ಪಷ್ಟನೆಗಳೊದಿಗೆ ಸುಗ್ರೀವಾಜ್ಞೆಯ ಕಡತವನ್ನು ಸೋಮವಾರ ರಾಜಭವನಕ್ಕೆ ರವಾನಿಸಿ ಅನುಮೋದನೆ ಕೋರಿದ್ದರು.
ರಾಜ್ಯಪಾಲರ ಆಕ್ಷೇಪಗಳಿಗೆ ಈ ಹಿಂದೆ ಸ್ಪಷ್ಟನೆ ನೀಡಿದ್ದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ನೋಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದು ಹೇಳಿದ್ದರು.
ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹ. ಬೇರೆ ಯಾವುದೇ ಅಕ್ರಮ ಸಾಲ ಮತ್ತು ಬಡ್ಡಿ ವಸೂಲಾತಿ ಅರ್ಜಿಗಳನ್ನು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ. ಇಂತಹ ಸಾಲವನ್ನು ವಸೂಲಿ ಮಾಡಲು ಮತ್ತು ವಿಧಿಸಿದ ಬಡ್ಡಿಯನ್ನು ಕಾನೂನಾತ್ಮಕವಾಗಿ ಕೂಡ ವಸೂಲಾತಿಗೆ ಅವಕಾಶ ನೀಡಿದರೆ ಸಂವಿಧಾನದ ಬಹುದೊಡ್ಡ ರಕ್ಷಣೆಯು ಸಮಾಜದಲ್ಲಿ ಅಕ್ರಮ ಬಡ್ಡಿ ವಿಧಿಸಿ ಅಕ್ರಮವಾಗಿ ಕಾನೂನುಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ. ಇದು ಸಂವಿಧಾನ ಮತ್ತು ಕಾನೂನು ವಿರೋಧಿ. ಜೊತೆಗೆ ಸಮಾಜಕ್ಕೆ ಕಂಟಕ ತರುವಂತಹ ಕ್ರಮವೇ ಹೊರತು ಸಂವಿಧಾನಾತ್ಮಕವಾಗುವುದಿಲ್ಲ ಎಂದು ತಿಳಿಸಿದ್ದರು.
ಕಾನೂನಾತ್ಮಕವಾಗಿ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನೈಜ ಸಾಲ ನೀಡಿದವರು ವಸೂಲಿ ಮಾಡಬಾರದೆಂದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲವೆಂದು ರಾಜ್ಯಪಾಲರಿಗೆ ಸಲ್ಲಿಸಿರುವ ಸುಗ್ರೀವಾಜ್ಞೆಯಲ್ಲಿ ಸರ್ಕಾರ ಎಲ್ಲಿಯೂ ಹೇಳಿಲ್ಲ. ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು/ನಿಷೇಧಿಸಲು ಸುಗ್ರೀವಾಜ್ಞೆ ಪ್ರಸ್ತಾಪಿಸುತ್ತದೆ. ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆತರುವಂತಹ ಯಾವುದೇ ಕ್ರಮ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ದಂಡನೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ/ಒತ್ತಡ ತಂತ್ರ, ಹಿಂಸೆ, ಕಿರುಕುಳ ನೀಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದರು. ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡಿದ ಕಾನೂನುಬದ್ಧ ಸಾಲ ಮತ್ತು ಅದರ ಮೇಲಿನ ಬಡ್ಡಿ ವಸೂಲಿ ಮಾಡುವಲ್ಲಿ ಜಪ್ತಿ, ಅವಹೇಳನ, ಬೆದರಿಕೆ, ಹರಾಜು ಮೊದಲಾದ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಅಂಶಗಳನ್ನು ಸುಗ್ರೀವಾಜ್ಞೆ ಹೊಂದಿದೆ. ಜತೆಗೆ ನೋಂದಣಿ ಮತ್ತು ಪರವಾನಗಿ ಇಲ್ಲದವರು ನೀಡಿರುವ ಸಾಲ ರದ್ದಾಗುತ್ತದೆ ಎಂದೂ ಸುಗ್ರೀವಾಜ್ಞೆಯಲ್ಲಿ ಹೇಳಿದೆ.
ಪ್ರಮುಖ ಅಂಶಗಳು
- ಮೈಕ್ರೋ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿಯಾಗಿರಬೇಕು.
ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನ ಸರ್ಕಾರ ತಿರಸ್ಕರಿಸಬದುದು. - ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಹಾರವನ್ನ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ADC-AC ಒಳಗೊಂಡ ಒಂಬುಡ್ಸ್ಮನ್ ನೇಮಕ ಮಾಡಬೇಕು.
- ಈ ಕಂಪನಿಗಳು ಸಾಲದ ಹೆಸರಲ್ಲಿ ಜನರಿಂದ ಯಾವ ವಸ್ತುಗಳು-ಆಸ್ತಿಗಳನ್ನ ಅಡಮಾನ ಇಡಿಸಿಕೊಳ್ಳುವಂತಿಲ್ಲ.
- ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡುವಂತಿಲ್ಲ