ಖ್ಯಾತ ಕಾಮಿಡಿಯನ್ ಹಾಗೂ ಯೂಟ್ಯೂಬರ್ ಸಮಯ್ ರೈನಾ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದಾರೆ. ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಮೂಲಕ ಎಲ್ಲರನ್ನೂ ನಗಿಸುವ ಕೆಲಸ ಮಾಡುತ್ತಿದ್ದ ರಣವೀರ್ ಅಲಾಹಾಬಾದಿಯಾ ಅವರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಅತಿಥಿಯಾಗಿ ಶೋಗೆ ಬಂದಿದ್ದ ರಣವೀರ್ ಅಲಾಹಾಬಾದಿಯಾ ಅಶ್ಲೀಲ ಕಮೆಂಟ್ನಿಂದ ಇಡೀ ಶೋ ಮೇಲೆ ಪರಿಣಾಮ ಬೀರಿದ್ದು ಇದರಿಂದ ಕಂಗಾಲಾಗಿರುವ ಸಮಯ್ ರೈನಾ ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ವಿಡಿಯೋಗನ್ನು ಡಿಲೀಟ್ ಮಾಡಿದ್ದಾರೆ.
ಇತ್ತೀಚೆಗೆ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಹೊಸ ಎಪಿಸೋಡ್ ಪ್ರಸಾರ ಕಂಡಿತ್ತು. ಇದರಲ್ಲಿ ಯೂಟ್ಯೂಬರ್ ರಣವೀರ್ ಅವರು ಪೋಷಕರ ಲೈಂಗಿಕತೆ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದರು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸಂಬಂಧ ಕೇಸ್ ಕೂಡ ದಾಖಲಾಯಿತು. ಇದಾದ ಬಳಿಕ ಆಗುತ್ತಿರುವ ಬೆಳವಣಿಗೆಯನ್ನು ಸಮಯ್ ರೈನಾ ಬಳಿ ಹ್ಯಾಂಡಲ್ ಮಾಡಲು ಸಾಧ್ಯ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಎಲ್ಲಾ ಎಪಿಸೋಡ್ ಗಳನ್ನು ಡಿಲೀಟ್ ಮಾಡಿದ್ದಾರೆ.
‘ಈಗ ನಡೆಯುತ್ತಿರುವ ಬೆಳವಣಿಗೆಯನ್ನು ನನ್ನಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಇಂಡಿಯಾಸ್ ಗಾಟ್ ಲೇಟೆಂಟ್ನ ಎಲ್ಲಾ ವಿಡಿಯೋಗಳನ್ನು ನನ್ನ ಚಾನೆಲ್ನಿಂದ ತೆಗೆದುಹಾಕಿದ್ದೇನೆ. ಜನರು ನಗುವಂತೆ ಮಾಡುವುದು ನನ್ನ ಉದ್ದೇಶ. ತನಿಖೆ ಸರಿಯಾಗಿ ಆಗಲು ನಾನು ಎಲ್ಲ ಅಧಿಕಾರಿಗಳ ಜೊತೆ ಸಹಕರಿಸುತ್ತಿದ್ದೇನೆ. ಧನ್ಯವಾದಗಳು’ ಎಂದು ಸಮಯ್ ರೈನಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಸಮಯ್ ರೈನಾ ಅವರು ಗುಜರಾತ್ನಲ್ಲಿ ಏಪ್ರಿಲ್ 17, 18, 19 ಹಾಗೂ 20ರಂದು ಶೋ ನೀಡಬೇಕಿತ್ತು. ಆದರೆ, ಇದು ರದ್ದಾಗಿದೆ ಎನ್ನಲಾಗಿದೆ. ಬುಕ್ ಮೈ ಶೋನಿಂದ ಟಿಕೆಟ್ ಬುಕಿಂಗ್ ಆಯ್ಕೆ ತೆಗೆದು ಹಾಕಲಾಗಿದೆ.