ಮನೆಯ ತುಂಬ ಹೆಣ್ಣು ಮಕ್ಕಳೇ ತುಂಬಿದ್ದು, ನಮ್ಮ ವಂಶವನ್ನು ಉದ್ಧಾರ ಮಾಡಲು ಮನೆಗೊಬ್ಬ ಮೊಮ್ಮಗ ಬೇಕಿತ್ತು ಎಂದಿರುವ ಮೆಗಾಸ್ಟಾರ್ ಚಿರಂಜೀವಿ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
ಇತ್ತೀಚೆಗೆ ನಡೆದ ಬ್ರಹ್ಮ ಆನಂದಂ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೇಳೆ ಮಾತನಾಡಿದ ಚಿರಂಜೀವಿ, ನನ್ನ ಮನೆಯಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದಾರೆ. ಹೀಗಾಗಿ ನನಗೆ ಮನೆಯಲ್ಲಿರುವಂತೆ ಭಾಸವಾಗುವುದಿಲ್ಲ. ಬದಲಿಗೆ ಮಹಿಳಾ ಹಾಸ್ಟೆಲ್ನಲ್ಲಿ ವಾಸಿಸುತ್ತಿರುವಂತೆ ಮತ್ತು ನಾನು ವಾರ್ಡನ್ ಆಗಿರುವಂತೆ ಭಾಸವಾಗುತ್ತದೆ. ನಮ್ಮ ಕುಟುಂಬದ ವಂಶವನ್ನು ಮುಂದುವರಿಸಲು ಮೊಮ್ಮಗನು ಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
‘ಮನೆಯಲ್ಲಿ ಇರುವಾಗ ಮೊಮ್ಮಕ್ಕಳು ಸುತ್ತುವರೆದಿರುವಂತೆ ಭಾಸವಾಗುವುದಿಲ್ಲ. ನನ್ನ ಸುತ್ತಲೂ ಹೆಂಗಸರೇ ಸುತ್ತುವರೆದಿರುವುದರಿಂದ ನಾನು ಲೇಡೀಸ್ ಹಾಸ್ಟೆಲ್ ವಾರ್ಡನ್ ಎಂದು ಅನಿಸುತ್ತದೆ. ನಮ್ಮ ವಂಶವು ಮುಂದುವರಿಯಲು ಈ ಬಾರಿಯಾದರೂ (ರಾಮ್) ಚರಣ್ಗೆ ಗಂಡು ಮಗುವಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೇನೆ, ಆದರೆ ಅವನಿಗೂ ಹೆಣ್ಣು ಮಗುವಾಯಿತು’ ಎಂದಿದ್ದಾರೆ.
ನನ್ನ ಮಗ ರಾಮ್ ಚರಣ್ಗೆ ಮತ್ತೊಂದು ಹೆಣ್ಣು ಮಗು ಹುಟ್ಟಬಹುದು ಎಂಬ ಭಯವಿದೆ. ಅವನಿಗೆ ಮತ್ತೆ ಹೆಣ್ಣು ಮಗುವಾದರೆ ಎಂದು ನಾನು ಹೆದರುತ್ತೇನೆ ಎಂದು ಚಿರಂಜೀವಿ ತಿಳಿಸಿದ್ದಾರೆ.