ಬಾಲಿವುಡ್ ನಟಿ ಜಯಾ ಬಚ್ಚನ್ ಸದ್ಯ ರಾಜಕಾರಣಿಯಲ್ಲಿ ಬ್ಯುಸಿ ಇದ್ದಾರೆ. ಸಮಾಜಾವಾದಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜಯಾ ಬಚ್ಚನ್ ಇದೀಗ ರಾಜ್ಯ ಸಭೆಯಲ್ಲಿ ಚಿತ್ರರಂಗದ ಪರವಾಗಿ ಧ್ವನಿ ಎತ್ತಿದ್ದಾರೆ. ಇತ್ತಿಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಬಜೆಟ್ ಬಗ್ಗೆ ಮಾತನಾಡಿದ್ದು ಬಜೆಟ್ ನಲ್ಲಿ ಚಿತ್ರರಂಗವನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಚಿತ್ರರಂಗವನ್ನು ನಿರ್ಲಕ್ಷಿಸುತ್ತಿದೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳನ್ನು ಮುಚ್ಚಲಾಗುತ್ತಿದೆ ಎಂದು ಅವರು ವಿಷಾದ ಹೊರಹಾಕಿದರು. ‘ಚಿತ್ರರಂಗವನ್ನು ನೀವು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೀರಿ ಮತ್ತು ಇತರ ಸರ್ಕಾರಗಳು ಸಹ ಅದೇ ಕೆಲಸವನ್ನು ಮಾಡುತ್ತಿವೆ. ನೀವು ಈಗ ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ನೀವು ಸಿನಿಮಾ ರಂಗವನ್ನು ನಿಮ್ಮ ಸ್ವಂತ ಉದ್ದೇಶಕ್ಕಾಗಿ ಮಾತ್ರ ಬಳಸುತ್ತಿದ್ದೀರಿ’ ಎಂದು ಜಯಾ ಬಚ್ಚನ್ ಹೇಳಿದ್ದಾರೆ.
‘ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಮುಚ್ಚುತ್ತಿವೆ. ಜನರು ಸಿನಿಮಾ ನೋಡಲು ಹೋಗುತ್ತಿಲ್ಲ ಏಕೆಂದರೆ ಅದು ತುಂಬಾನೇ ದುಬಾರಿ ಆಗಿದೆ. ಬಹುಶಃ ನೀವು ಈ ಉದ್ಯಮವನ್ನು ಸಂಪೂರ್ಣವಾಗಿ ನಾಶಮಾಡಲು ಬಯಸುತ್ತಿದ್ದೀರಿ. ಇಡೀ ಜಗತ್ತನ್ನು ಭಾರತಕ್ಕೆ ಸಂಪರ್ಕಿಸುವ ಏಕೈಕ ಉದ್ಯಮ ಇದಾಗಿದೆ’ ಜಯಾ ಬಚ್ಚನ್ ಹೇಳಿದ್ದಾರೆ.
‘ನಾನು ನನ್ನ ಚಿತ್ರರಂಗದ ಪರವಾಗಿ ಮಾತನಾಡುತ್ತಿದ್ದೇನೆ. ಈ ತ್ರಉದ್ಯಮದ ಪರವಾಗಿ ಈ ಸದನಕ್ಕೆ ಮನವಿ ಮಾಡುತ್ತಿದ್ದೇನೆ, ದಯವಿಟ್ಟು ಅವರನ್ನು ಬಿಟ್ಟುಬಿಡಿ. ದಯವಿಟ್ಟು ಅವರ ಮೇಲೆ ಸ್ವಲ್ಪ ಕರುಣೆ ತೋರಿ. ನೀವು ಈ ಉದ್ಯಮವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ದಯವಿಟ್ಟು ಅದನ್ನು ಮಾಡಬೇಡಿ’ ಎಂದು ಅವರು ಹೇಳಿದ್ದಾರೆ.