ಬೆಂಗಳೂರು/ನವದೆಹಲಿ:- ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ. ಶಕ್ತಿ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ , ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ.
ಒಂದೆಡೆ ಗ್ಯಾರೆಂಟಿ’ಯಿಂದ ಇದಾಲೇ ಸಂಕಷ್ಟಕ್ಕೆ ಸಿಲುಕಿರೋ KSRTC ದಿಢೀರನೆ ಪ್ರಯಾಣದ ವೆಚ್ಚವನ್ನು ಒಂದೂವರೆ ಪಟ್ಟು ಮಾಡಿ ಪ್ರಯಾಣಿಕರಿಗೆ ಆಘಾತ ನೀಡಿರುವ ಬೆನ್ನಲ್ಲೇ ಸುಪ್ರೀಂನಿಂದ ಬಿಗ್ ಶಾಕ್ ಎದುರಾಗಿದೆ.
ಕಳೆದ ಡಿಸೆಂಬರ್ನಲ್ಲಿ ಕೆಎಸ್ಆರ್ಟಿಸಿ 295 ಕೋಟಿ ನಷ್ಟ ಆಗಿದೆ ಎಂದು ತೋರಿಸಿದೆ. ಅದೇ ಇನ್ನೊಂದೆಡೆ, ಇದಾಗಲೇ ಚಾಲಕರು ಮತ್ತು ನಿರ್ವಾಹಕರು ಸಂಬಳ ಹೆಚ್ಚಳಕ್ಕೆ ಪ್ರತಿಭಟನೆಯನ್ನೂ ಮಾಡಿಯಾಗಿದೆ. ಇವೆಲ್ಲ ಹೊಡೆತಕ್ಕೆ ಸಿಕ್ಕಿ ಬಸ್ಸಿನ ಟಿಕೆಟ್ ದರವನ್ನು ದಿಢೀರ್ನೆ ಏರಿಸಿ, ನಷ್ಟವನ್ನು ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ ಕೆಎಸ್ಆರ್ಟಿಸಿ. ಒಂದೆಡೆ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟು, ದೂರದ ಊರುಗಳಿಗೆ ಹೋಗುವ ರಾಜಹಂಸ, ಸ್ಲೀಪರ್ ಕೋಚ್ ಬಸ್ಗಳಿಗೆ ಒಂದೂವರೆ ಪಟ್ಟು ರೇಟ್ ಆಗಿದೆ. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್ ಅನ್ನು ರದ್ದು ಮಾಡಿ, ಸ್ಲೀಪರ್ ಕೋಚ್ ಹಾಕುವ ಮೂಲಕ, ಈ ಹೆಚ್ಚುವರಿ ಹಣ ತೆರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದಾಗಲೇ, ಕೆಎಸ್ಆರ್ಟಿಸಿ ಬಸ್ ದರಕ್ಕೆ ಪೈಪೋಟಿ ನೀಡುತ್ತಿರುವ ಕೆಲವು ಖಾಸಗಿ ಬಸ್ಗಳು, ಅದಕ್ಕಿಂತ ಕಡಿಮೆ ದರವನ್ನು ಇಟ್ಟು, ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇವೆಲ್ಲವುಗಳ ನಡುವೆಯೇ, ಕೆಎಸ್ಆರ್ಟಿಸಿಗೆ ಬಿಗ್ ಶಾಕ್ ಒಂದನ್ನು ಸುಪ್ರೀಂಕೋರ್ಟ್ ನೀಡಿದೆ. 2003ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾರಿಗೆ ಬಸ್ಗೆ ಸಂಬಂಧಿಸಿದಂತೆ ಇದ್ದ ಕಾಯ್ದೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಈ ಮೂಲಕ KSRTCಯ ಏಕಸ್ವಾಮ್ಯವನ್ನು ತೆಗೆದುಹಾಕಿದೆ.
ಇದರ ಬಗ್ಗೆ ಸುಲಭದಲ್ಲಿ ಹೇಳಬೇಕು ಎಂದಾದರೆ, ಇನ್ನು ಮುಂದೆ ಖಾಸಗಿ ಬಸ್ಗಳು ಯಾವ ಊರುಗಳಿಗೆ, ಯಾವ ಪ್ರದೇಶಗಳಿಗೆ ಬೇಕಾದರೂ ಹೋಗಬಹುದಾಗಿದೆ. ಇಲ್ಲಿಯವರೆಗೆ ಇದ್ದ ನಿಯಮ ಏನೆಂದರೆ, ಖಾಸಗಿ ಬಸ್ಗಳಿಗೆ ಎಲ್ಲಾ ರೂಟ್ಗಳಲ್ಲಿ ಕೆಎಸ್ಆರ್ಟಿಸಿ ಅವಕಾಶ ನೀಡುತ್ತಿರಲಿಲ್ಲ. ಎಲ್ಲಿ ಜನಸಂಖ್ಯೆ ಕಡಿಮೆ ಇದೆ, ವರ್ಕ್ಔಟ್ ಆಗುವುದಿಲ್ಲ ಎನ್ನುವ ಕೆಲವು ಕಡೆಗಳಲ್ಲಿ ಖಾಸಗಿ ಬಸ್ಗಳಿಗೆ ಸರ್ಕಾರ ಅನುಮತಿ ನೀಡುತ್ತಿತ್ತು. ಕೆಲವೇ ಕೆಲವು ಊರುಗಳಿಗೆ ಮಾತ್ರ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ಈಗ ಚಲಿಸುತ್ತಿವೆಯಾದರೂ, ಎಷ್ಟೋ ರೂಟ್ಗಳಲ್ಲಿ ಜನರು ಸರ್ಕಾರಿ ಬಸ್ಗೆ ಕಾದು ಕುಳಿತುಕೊಳ್ಳುವ ಅನಿವಾರ್ಯತೆ ಇದೆ.
ಅದೂ ಈಗ ಶಕ್ತಿ ಯೋಜನೆಯಿಂದಾಗಿ ಕೆಲವು ರೂಟ್ಗಳಲ್ಲಿ ಬಸ್ ಸಂಚಾರವನ್ನೇ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಪಾಡು ಕೇಳುವುದೇ ಬೇಡ. ಇದೀಗ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಎಲ್ಲದ್ದಕ್ಕೂ ಕಡಿವಾಣ ಬಿದ್ದಿದೆ. ಖಾಸಗಿ ಬಸ್ಗಳ ಜೊತೆ ಕೆಎಸ್ಆರ್ಟಿಸಿ ದರ ಸೇರಿದಂತೆ ಎಲ್ಲವುಗಳಲ್ಲಿಯೂ ಕಾಂಪೀಟ್ ಮಾಡಲೇಬೇಕಿದೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಇದೀಗ ಖಾಸಗಿ ಬಸ್ಗಳು ಎಲ್ಲಾ ರೂಟ್ಗಳಲ್ಲಿಯೂ ಸಂಚರಿಸಲು ಅನುಮತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಜನರು ಖಾಸಗಿ ಬಸ್ನತ್ತ ಮುಖ ಮಾಡುವ ಸಾಧ್ಯತೆ ಇದೆ. ಉಚಿತ ಪ್ರಯಾಣ ಬಯಸುವವರು ಕೆಎಸ್ಆರ್ಟಿಸಿ ಮೊರೆ ಹೋದರೆ, ಉಳಿದವರು ಖಾಸಗಿ ಬಸ್ಗಳತ್ತ ಒಲವು ತೋರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದು ಕೆಎಸ್ಆರ್ಟಿಸಿಗೆ ಬಿಗ್ ಶಾಕ್ ಆಗಿದೆ