ಶಿವಮೊಗ್ಗ: ಪ್ಯಾರಾ ಟ್ರೂಪರ್ ಟ್ರೈನಿಂಗ್ ಸೆಂಟರ್ ನಲ್ಲಿ ದೈನಂದಿನ ತರಬೇತಿ ವೇಳೆ ಮೇಲಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಯೋಧ ಮಂಜುನಾಥ್ ರ ಹುಟ್ಟೂರು ಸಂಕೂರಿನಲ್ಲಿ ನೀರವ ಮೌನ ಆವರಿಸಿದೆ. ಮಂಜುನಾಥ್ ರವರ ಉಸ್ತುವಾರಿಯಲ್ಲಿಯೆ ನಿರ್ಮಾಣವಾದ ಅವರ ಹೊಸ ಮನೆಯಲ್ಲಿ ದುಃಖ ಮಡುಗಟ್ಟಿದೆ. ಸಂಬಂಧಿಕರು ಆಪ್ತರು ಸ್ನೇಹಿತರು ನೆರೆಹೊರೆಯವರು ದೌಡಾಯಿಸಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಈ ನಡುವೆ ಮಾದ್ಯಮಗಳ ಜೊತೆ ಮಾಡಿದ ಸ್ಥಳಿಯ ಮುಖಂಡ ಮಂಜುನಾಥ್, ನಾಳೆ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿ ಮೃತ ಯೋಧನ ಪಾರ್ಥೀವ ಶರೀರ ಹೊಸನಗರ ಪೇಟೆಗೆ ಬರಲಿದೆ. ಅಲ್ಲಿನ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದಿಂದ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ , ಯೋಧನ ಹುಟ್ಟೂರು ಸಂಕೂರಿಗೆ ತರಲಾಗುವುದು. ಬೆಳಗ್ಗೆ ಹನ್ನೊಂದು ಗಂಟೆ ಬೆಳಗಾವಿಯಿಂದ ವಾಯುಪಡೆಯ ಯೋಧರು ಸಂಕೂರಿಗೆ ಆಗಮಿಸಿ ಮೃತ ಯೋಧರಿಗೆ ಸರ್ಕಾರಿ ಗೌರವದ ಜೊತೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಆನಂತರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಅಂತಿಮ ನಮನ ಸಲ್ಲಿಲಾಗುವುದು. ಬಳಿಕ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಮೃತ ಯೋಧನ ನಿಧನಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದು, ಜೇನಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ, ಮಸಗಲ್ಲಿ ಸರ್ಕಾರಿ ಶಾಲೆಯ ಆವರಣ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಮೃತರ ಭಾವಚಿತ್ರ ಅಳವಡಿಸಿ ಶೃದ್ದಾಂಜಲಿ ಅರ್ಪಿಸಿದ್ದಾರೆ..
ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಮೃತರ ಸಹೋದರ ಯುವರಾಜ್, ನಿನ್ನೆ ರಾತ್ರಿ ವಾಯುಸೇನೆಯಿಂದ ಕರೆ ಬಂದಿದ್ದು, ಮಂಜುನಾಥ್ ರವರು ದೈನಂದಿನ ತರಬೇತಿ ಸಂದರ್ಭದಲ್ಲಿ ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಾಚೂಟ್ ಓಪನ್ ಆಗದೆ ಕೆಳಕ್ಕೆ ಬಿದ್ದಿದ್ದರು ಅವರನ್ನು ಪತ್ತೆ ಮಾಡಿ, ಆಸ್ಪತ್ರೆಗೆ ರವಾನಿಸಿದೆವು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಮೃತರ ತಂದೆ ಮಾತನಾಡುತ್ತಾ ವಿಷಯ ಕೇಳಿ ಆಘಾತವಾಗಿದೆ, ಇತ್ತೀಚೆಗೆ ಮನೆಗೆ ಬಂದು ಹೋಗಿದ್ದ. ಸಂತೋಷದಿಂದ ರಜೆ ಕಳೆದಿದ್ದ. ಮಲೆನಾಡ ಸೌಂದರ್ಯ ನೋಡಿ ಖುಷಿ ಪಟ್ಟಿದ್ದ. ತನ್ನ ಸ್ನೇಹಿತರ ಜೊತೆಗೆ ನಲಿದಾಡಿ ವಾಪಸ್ ತೆರಳಿದ್ದ. ಇದೀಗ ಆತನ ಸಾವಿನ ಸುದ್ದಿ ಕೇಳುತ್ತಿದ್ದೇವೆ. ದೇಶಕ್ಕಾಗಿ ಮಗ ಜೀವ ಕೊಟ್ಟಿದ್ದಾನೆ ಎಂದರು.