ಟ್ರಿಪೋಲಿ: ಲಿಬಿಯಾದ ಆಗ್ನೇಯ ಮತ್ತು ಪಶ್ಚಿಮದ ಎರಡು ಪ್ರದೇಶಗಳಲ್ಲಿ ಕನಿಷ್ಠ 29 ವಲಸಿಗರ ಮೃತದೇಹ ಪತ್ತೆಯಾಗಿದೆ ಎಂದು ಭದ್ರತಾ ಸಂಸ್ಥೆ ಹಾಗೂ ರೆಡ್ ಕ್ರೆಸೆಂಟ್ ಹೇಳಿದೆ.
ಅಲ್ವಾಹತ್ ಜಿಲ್ಲೆಯ ಜಿಖಾರಾದಲ್ಲಿ ಸಾಮೂಹಿಕ ಸಮಾಧಿಯಲ್ಲಿ 19 ಮೃತದೇಹಗಳು ಪತ್ತೆಯಾಗಿದ್ದು ಸಾವುಗಳು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿವೆ.
ಮೂರು ಗೋರಿಗಳಲ್ಲಿ ಮೃತದೇಹ ಪತ್ತೆಯಾಗಿದ್ದು ಮೊದಲನೆಯ ಗೋರಿಯಲ್ಲಿ ಒಂದು ಮೃತದೇಹವಿದ್ದರೆ ಎರಡನೆಯ ಗೋರಿಯಲ್ಲಿ 4 ಮತ್ತು ಮೂರನೆಯ ಗೋರಿಯಲ್ಲಿ 14 ಮೃತದೇಹಗಳಿದ್ದವು ಎಂದು ಜಿಲ್ಲಾ ಭದ್ರತಾ ಪ್ರಾಧಿಕಾರ ಹೇಳಿದೆ. ಮತ್ತೊಂದು ಪ್ರಕರಣದಲ್ಲಿ ಟ್ರಿಪೋಲಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಝವಿಯಾ ನಗರದಲ್ಲಿನ ಡಿಲಾ ಬಂದರಿನ ಸಮೀಪ ಮುಳುಗಿದ್ದ ದೋಣಿಯಿಂದ 10 ವಲಸಿಗರ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ರೆಡ್ಕ್ರೆಸೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.