ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪೊಲೀಸ್ ಠಾಣೆ ಮುಂದೆ ನಿನ್ನೆ ರಾತ್ರಿ ಹೈಡ್ರಾಮಾ ನಡೆದಿದೆ. ತಂದೆ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಿಪಿಐ ಅಶೋಕ ಸದಲಗಿ ಹೋರಾಟ ನಡೆಸಿದ್ದಾರೆ. ಹಾರುಗೇರಿ ಇಎಸ್ಐ ಮಾಳಪ್ಪ ಪೂಜಾರಿ ಎಂಬಾತನ ವಿರುದ್ಧ ಕಿರುಕುಳದಿಂದ ತನ್ನ ತಂದೆ ಸಾವನ್ನಪ್ಪಿದ್ದಾರೆ ಎಂದು ಹಾರುಗೇರಿ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪಿಐ ಒತ್ತಾಯಿಸಿದ್ದರು.
ನಡೆದಿದ್ದು ಏನು..?
ಅಶೋಕ ಸದಲಗಿ ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಣೆ ಮಾಡ್ತಾರೆ. ಸದಾಶಿವ ರಡ್ಡೆರಟ್ಟಿ ಎಂಬಾತನಿಂದಿಗೆ ಜಾಗದ ವಿಚಾರವಾಗಿ ಕಳೆದ ಕೆಲದಿನಗಳಿಂದ ವ್ಯಾಜ್ಯವಿತ್ತು. ಜ.10ರಂದು ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ತಂಡದವರು ಅಕ್ರಮವಾಗಿ ಜಮೀನು ಪ್ರವೇಶ ಮಾಡಿದ್ದರಂತೆ. ಇದನ್ನು ಪ್ರಶ್ನೆ ಮಾಡಿದ್ದ ಸಿಪಿಐ ತಂದೆ ಅಣ್ಣಪ್ಪ ಸದಲಗಿ ಮೇಲೆ ಇವರೆಲ್ಲರೂ ಸೇರಿ ಹಲ್ಲೆಗೆ ಪ್ರಯತ್ನ ಮಾಡಿದ್ದರಂತೆ. ಕೂಡಲೇ ಅಣ್ಣಪ್ಪ 112 ಗೆ ಕರೆ ಮಾಡಿ ಪೊಲೀಸ್ರಿಗೆ ಮಾಹಿತಿ ತಿಳಿಸಿದ್ದರಂತೆ. ಬಳಿಕ ಹಾರುಗೇರಿ ಪೊಲೀಸರು.ಅಣ್ಣಪ್ಪ ಹಾಗೂ ಬಾಬು ನಡೋಣಿ ಸೇರಿದಂತೆ ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದು, ಹಾರುಗೇರಿ ಪಿಎಸ್ಐ ಮಾಳಪ್ಪ ಪೂಜಾರಿ ಎಂಬಾತ ಇಡೀ ದಿನ ಅಣ್ಣಪ್ಪನನ್ನು ಠಾಣೆಯಲ್ಲಿ ಕೂಡಿಸಿಕೊಂಡು ಕಿರುಕುಳ ನೀಡಿದ್ರಂತೆ. ಸಂಜೆ ಆಗ್ತಿದ್ದಂತೆ ಹೈ ಬಿಪಿ ಮತ್ತು ಶುಗರ್ ಹೈ ಆಗಿ ಅಣ್ಣಪ್ಪ ತೀವ್ರ ಅಸ್ವಸ್ಥರಾಗಿದ್ದಾರೆ. ಹಾರುಗೇರಿ ಠಾಣೆಯಿಂದಲೇ ಅಣ್ಣಪ್ಪನನ್ನು ಖಾಸಗಿ ಆಸ್ಪತ್ರೆಗೆ ಎರಡನೇ ಪುತ್ರ ದಾಖಲು ಮಾಡಿದ್ದು, ಖುದ್ದು ಸಿಪಿಐ ಅಶೋಕ ಸದಲಗಿ ಎಫ್ಐಆರ್ ದಾಖಲಿಸುವಂತೆ ಪಿಎಸ್ಐ, ಸಿಪಿಐ, ಅಥಣಿ ಡಿವೈಎಸ್ಪಿಗೆ ಕರೆ ಮಾಡಿ ಮನವಿ ಮಾಡಿದ್ರೂ, ದೂರು ದಾಖಲಿಸಿಕೊಳ್ಳದೇ ಹಾರುಗೇರಿ ಪಿಎಸ್ಐ ಬೇಜವಾಬ್ದಾರಿ ತೋರಿದ್ದಾರೆಂದು ಎಂದು ಸಿಪಿಐ ಆರೋಪಿಸಿದ್ದಾರೆ.
ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಪೊಲೀಸರ ಕಿರುಕುಳಕ್ಕೆ ಅಣ್ಣಪ್ಪ ಸದಲಗಿ ಸಾವನ್ನಪ್ಪಿಲ್ಲ. ಸಿಸಿಟಿವಿ ಪರಿಶೀಲನೆ ನಡೆಸಿಲಾಗಿದೆ. ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಜ.10 ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಈಗಾಗಲೇ ಮೃತ ಅಣ್ಣಪ್ಪನಿಗೆ ಹೃದಯ ಸಮಸ್ಯೆ ಇತ್ತು. 2017ರಲ್ಲಿ ಶಸ್ತ್ರಚಿಕಿತ್ಸೆ ಆಗಿತ್ತು. 9 ದಿನಗಳ ಹಿಂದೆ ಕೆಎಲ್ಇ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆ ಇರುವದರಿಂದ ಚಿಕಿತ್ಸೆ ಪಡೆದಿದ್ರೂ. ಅಲ್ಲಿ ವೆಂಟಿಲೇಟರನಲ್ಲಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಈಗ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.