ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾದಲ್ಲಿ ‘ಶೆಟ್ಟಿ’ ಪಾತ್ರದಲ್ಲಿ ನಟಿಸಿದ್ದ ಗಿರಿ ದಿನೇಶ್ ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಗಿರಿ ದಿನೇಶ್ ಅವರಿಗೆ 45 ವರ್ಷ ವಯಸ್ಸಾಗಿತ್ತು.
ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿತು. ಏಕಾಏಕಿ ಕುಸಿದು ಬಿದ್ದ ಗಿರಿ ದಿನೇಶ್ ಅವರನ್ನ ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಗಿರಿ ದಿನೇಶ್ ನಿಧನರಾಗಿದ್ದಾರೆ. ಇಂದು ಗಿರಿ ದಿನೇಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗಿರಿ ದಿನೇಶ್ ಅವರು ನವಗ್ರಹ, ವಜ್ರ ಹಾಗೂ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ದಿವಂಗತ ನಟ ದಿನೇಶ್ ಅವರ ಪುತ್ರ ಗಿರಿ. ಹಾಸ್ಯ ನಟನಾಗಿಯೂ, ಖಳನಟನಾಗಿಯೂ ದಿನೇಶ್ ಜನಪ್ರಿಯತೆ ಪಡೆದಿದ್ದರು. ಚಂದನವನದ ಖಳನಟ ಪುತ್ರರೇ ಸೇರಿ ಮಾಡಿದ ‘ನವಗ್ರಹ’ ಸಿನಿಮಾದಲ್ಲಿ ಗಿರಿ ದಿನೇಶ್ ‘ಶೆಟ್ಟಿ’ ಪಾತ್ರಕ್ಕೆ ಜೀವ ತುಂಬಿದ್ದರು. ‘ನವಗ್ರಹ’ ಸಿನಿಮಾದಲ್ಲಿ ಗಿರಿ ದಿನೇಶ್ ಅವರ ಕಾಮಿಡಿ ಟೈಮಿಂಗ್ ಹೈಲೈಟ್ ಆಗಿತ್ತು.
‘ನವಗ್ರಹ’ ರೀ ರಿಲೀಸ್ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಗಿರಿ ದಿನೇಶ್ ಭಾಗವಹಿಸಿರಲಿಲ್ಲ. ಕ್ಯಾಮರಾದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು. ‘ನವಗ್ರಹ’ ಸಿನಿಮಾದ ಬಳಿಕ ‘ವಜ್ರ’ ಹಾಗೂ ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’ ಚಿತ್ರಗಳಲ್ಲಿ ಗಿರಿ ದಿನೇಶ್ ಮಿಂಚಿದ್ದರು.