ಬೆಂಗಳೂರು:- ಇಂದು ಇಬ್ಬರು ಹಾಲಿ ಮತ್ತು ಮಾಜಿ ಸಿಎಂಗಳ ಪಾಲಿಗೆ ಬಿಗ್ ಡೇ ಆಗಿತ್ತು.. ಒಂದು ಕಡೆ ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣದ ಸಿಬಿಐ ತನಿಖೆಗೆ ವಹಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇನ್ನೊಂದು ಕಡೆ ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ..
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಅವರ ಕುಟುಂಬ ಭಾಗಿಯಾಗಿದ್ದು, ಈ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದರು. ಧಾರವಾಡ ಹೈಕೋರ್ಟ್ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ನಿಟ್ಟುಸಿರು ಬಿಡುವಂತಾಗಿದೆ.
ಮುಡಾ ಹಗರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ನೀಡಿದ್ದರು. ಆ ನಂತರ ಸರ್ಕಾರ ಮುಡಾ ಹಗರಣದ ತನಿಖಾ ಜವಾಬ್ದಾರಿಯನ್ನು ಲೋಕಾಯುಕ್ತ ಸಂಸ್ಥೆಗೆ ನೀಡಿತ್ತು. ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಕೈಕೆಳಗೆ ಇರುವುದರಿಂದ ಪಾರದರ್ಶಕ ತನಿಖೆಯಾಗುವುದಿಲ್ಲ. ಈ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಧಾರವಾಡ ಹೈಕೋರ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ಈ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್ನಲ್ಲೇ ನಡೆಯಿತು. ಜ.27 ರಂದು ಸ್ನೇಹಮಯಿ ಕೃಷ್ಣ ಅವರ ಪರ ವಕೀಲರು ಹಾಗೂ ಸಿಎಂ ಸಿದ್ದರಾಮಯ್ಯನವರ ಪರ ವಕೀಲರು ವಾದ, ಪ್ರತಿವಾದ ಮಂಡಿಸಿದ್ದರು. ಸುದೀರ್ಘ ವಾದ-ಪ್ರತಿವಾದದ ನಂತರ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ಈ ಬಗ್ಗೆ ಇಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಧಾರವಾಡದ ಏಕಸದಸ್ಯ ಪೀಠವು, ಲೋಕಾಯುಕ್ತ ತನಿಖೆಯಲ್ಲಿ ತಾರತಮ್ಯ ನಡೆಯುತ್ತದೆ ಎಂದು ಹೇಳಲು ಯಾವುದೇ ಆಧಾರ ಇಲ್ಲ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ. ಅದರ ತನಿಖೆ ಅಸಮರ್ಪಕ ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಸ್ನೇಹಮಯಿ ಅವರು ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸುವ ಮೂಲಕ ಸಿಎಂ ಸಿದ್ದುಗೆ ಬಿಗ್ ರಿಲೀಫ್ ನೀಡಿದೆ.
ಮುಡಾ ಹಗರಣದ ಸಂಬಂಧ ಹೈಕೋರ್ಟ್ನಲ್ಲಿ ಸ್ನೇಹಮಯಿ ಕೃಷ್ಣ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಸಿಎಂ ರಾಜೀನಾಮೆ ನೀಡಲಿ ಎನ್ನುವ ಪ್ರತಿಪಕ್ಷಗಳಿಗೆ ಬಾಯಿಗೆ ಸದ್ಯಕ್ಕಂತೂ ಹೈಕೋರ್ಟ್ ಬೀಗ ಹಾಕಿದಂತಾಗಿದೆ. ಆದರೆ, ಈ ಪ್ರಕರಣವನ್ನು ಇಷ್ಟಕ್ಕೇ ಬಿಡುವುದಿಲ್ಲ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸಲೇಬೇಕು ಎಂದು ಸ್ನೇಹಮಯಿ ಕೃಷ್ಣ ಅವರ ಪರ ವಕೀಲರು ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಲು ಸಜ್ಜಾಗಿದ್ದಾರೆ.
ಇನ್ನೊಂದಡೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ರಿಲೀಫ್ ಸಿಕ್ಕಿದೆ. ಬಿಎಸ್ ಯಡಿಯೂರಪ್ಪ ಅವರು ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠವು ತೀರ್ಪು ಪ್ರಕಟಿಸಿದೆ.
ನ್ಯಾ.ಎಂ ನಾಗಪ್ರಸನ್ನ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ನೀಡಿ ನ್ಯಾಯಾಧೀಶರಾದ ನ್ಯಾ.ಎಂ ನಾಗಪ್ರಸನ್ನ ಅವರು ಆದೇಶ ಹೊರಿಡಿಸಿದ್ದಾರೆ. ಸದ್ಯ ಬಿ ಎಸ್ ಯಡಿಯೂರಪ್ಪ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಸದ್ಯಕ್ಕೆ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಇದೊಂದು ಬಿಗ್ ರಿಲೀಫ್ ಸಿಕ್ಕಂತಾಗಿದೆ. ಆದರೆ ಯಡಿಯೂರಪ್ಪ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಬಿಎಸ್ವೈಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ಈ ಪ್ರಕರಣ ರದ್ದು ಮಾಡಲು ಕೋರ್ಟ್ ನಿರಾಕರಿಸಿದೆ. ಇದರಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ ಅಷ್ಟೇ. ಆದ್ರೆ ಈ ಪ್ರಕರಣದ ಕಷ್ಟ ತಪ್ಪಿಲ್ಲ. ಯಾಕಂದ್ರೆ ಕೋರ್ಟ್ ಕೇವಲ ಜಾಮೀನು ನೀಡಿದೆ ಹೊರತು ಪ್ರಕರಣ ರದ್ದು ಮಾಡಿಲ್ಲ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿದಿದ್ದು, ಅದರಂತೆ ಇದೀಗ ಧಾರವಾಡ ಹೈಕೋರ್ಟ್ ಪೀಠ, ಪ್ರಕರಣ ರದ್ದು ಮಾಡುವ ಬದಲು ಕೇವಲ ಜಾಮೀನು ನೀಡಿದೆ.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಕಳೆದ 2024 ಮಾ.24ರಂದು ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಹಿಂದೆ, ತಮ್ಮ 17 ವರ್ಷದ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎನ್ನುವ ಆರೋಪ ಮಾಡಿ ಮಹಿಳೆಯೊಬ್ಬರು ದೂರು ನೀಡಿದ್ದರು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ. ಫೆ.2ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.