ಗದಗ: ರಾಜ್ಯ ಸರ್ಕಾರ ಮೈಕ್ರೋಫೈನಾನ್ಸ್ ಮತ್ತು ಮೀಟರ್ ಬಡ್ಡಿಕೋರರ ವಿರುದ್ಧ ಸುಗ್ರೀವಾಜ್ಞೆ ತರಲು ಮುಂದಾಗಿದೆ. ಆದರೂ ಕೂಡ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲುವಂತೆ ಕಾಣುತ್ತಿಲ್ಲ. ಗದಗ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗುತ್ತಿದೆ. ಮನೆ ಕಟ್ಟಲು ಸಾಲ ಪಡೆದು ಈಗ ಸಾಲ ತೀರಿಸಲಾಗದೇ ದಂಪತಿ ಕಣ್ಣೀರು ಹಾಕಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಊರೇ ಬಿಟ್ಟಿದ್ದಾರೆ.
ಶಿರಹಟ್ಟಿ ತಾಲೂಕಿನ ಖಾನಾಪುರ ಗ್ರಾಮದ ರಫೀಕ್ ದೊಡ್ಡಮನಿ ಹಾಗೂ ರಿಯಾನ ದೊಡ್ಡಮನಿ ಕುಟುಂಬ ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ದಂಪತಿ ಮನೆ ಕಟ್ಟೋದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ 3 ಲಕ್ಷ ಸಾಲ ಪಡೆದಿತ್ತು. ಈಗ ಬಡ್ಡಿ ಮೇಲೆ ಬಡ್ಡಿ ಕಟ್ಟಿ ಅಸಲು ತೀರಿಸೋಕೆ ಆಗದೇ ಗೋಳಾಡ್ತಿದ್ದಾರೆ. ಈಗಾಗಲೇ 1.30 ಲಕ್ಷ ಹಣ ಪಾವತಿ ಮಾಡಿದ್ದಾರೆ. ಆದರೆ, 90 ಸಾವಿರ ಬಡ್ಡಿ, 40 ಸಾವಿರ ಅಸಲಿಗೆ ಅಂತಿದ್ದಾರೆ. ಬಾಕಿ ಹಣ ಕಟ್ಟೋಕೆ ಒತ್ತಾಯಿಸುತ್ತಿದ್ದಾರೆ.
ಹೀಗಾಗಿ ಕಟ್ಟಿರೋ ಹೊಸ ಮನೆಯಲ್ಲಿ ಜೀವನ ನಡೆಸದೇ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಊರು ತೊರೆದ ದಂಪತಿ ಮಕ್ಕಳೊಂದಿಗೆ ಗದಗ ನಗರದ ಸ್ಲಂವೊಂದರಲ್ಲಿ ಬದುಕು ನಡೆಸುವಂತಾಗಿದೆ. ಫೈನಾನ್ಸ್ ಸಿಬ್ಬಂದಿ ಟಾರ್ಚರ್ ಹೇಳುತ್ತ ಮಹಿಳೆ ಕಣ್ಣೀರು ಹಾಕುತ್ತಿದ್ದು, ನಮಗೆ ಸಾವೊಂದೇ ದಾರಿ ಅಂತಿದ್ದಾರೆ.