ರಾಮನಗರ : ದರೋಡೆಗೆ ವಿಫಲ ಯತ್ನ ನಡೆಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಜ. 27ರ ರಾತ್ರಿ ತೋಟದ ಮನೆಯಲ್ಲಿ ದರೋಡೆ ಮಾಡಲು ಯತ್ನಿಸಿದ್ದು, ಮನೆಯ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರಿಂದ ರಾಡಿನಿಂದ ಅವರ ತಲೆಗೆ ಒಡೆದಿದ್ದ ಖದೀಮರು ಪರಾರಿಯಾಗಿದ್ದರು. ಮನೆಯ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸುಹಾಸ್ (24), ರೇವಣ್ಣ ಅಲಿಯಾಸ್ ಅಭಿ (29), ಭುವನ್ ಗೌಡ ಅಲಿಯಾಸ್ ಭುವನ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಸುಲಭವಾಗಿ ಹಣ ಮಾಡಲು ಕಳ್ಳತನದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದು, ಶಿವನಹಳ್ಳಿಯಲ್ಲಿ ಹೊಸದಾಗಿ ಮನೆ ಗೃಹಪ್ರವೇಶ ಆಗಿದ್ದರಿಂದ ಅಲ್ಲಿ ಹಣ ಒಡವೆ ಹೆಚ್ಚಾಗಿ ಸಿಗುತ್ತದೆ ಎಂಬ ಕಾರಣದಿಂದ ಪ್ಲಾನ್ ಮಾಡಿ ಪೂರ್ವ ನಿಯೋಜಿತವಾಗಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಆದರೆ ಮನೆಯವರು ಎಚ್ಚರವಾಗಿ ಧೈರ್ಯದಿಂದ ಅವರನ್ನು ಹಿಡಿಯುವ ಪ್ರಯತ್ನ ಮಾಡಿದ್ದರಿಂದ ಕಳ್ಳತನ ಯತ್ನ ವಿಫಲವಾಗಿದೆ.
ಸರಗಳ್ಳನ ಬಂಧನ
ಇನ್ನೂ ಕಸಬಾ ಹೋಬಳಿಯ ತುಳಸಿ ದೊಡ್ಡಿ ಗ್ರಾಮದಲ್ಲಿ 2024ರ ಮಾ.15ರಂದು ಒಂಟಿ ಮಹಿಳೆಯಿಂದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುಳ್ಳಳ್ಳಿ ಗ್ರಾಮದ ಶಿವಕುಮಾರ್ ಎಂದು ಗುರುತಿಸಿದ್ದು ಈತ ಬೆಂಗಳೂರಿನಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ತುಳಸಿ ದೊಡ್ಡಿ ಒಂಟಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡಿರುವ ಮಾಹಿತಿಯನ್ನು ತಿಳಿಸಿದ್ದಾನೆ. ಕನಕಪುರ ಪೊಲೀಸರು ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿ ಸ್ಥಳ ಮಹಜರು ಮಾಡಿದ್ದಾರೆ.