ಕೋಲಾರ : ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ರೆಬಲ್ ಆಗಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧವೂ ಸಿಡಿದೆದ್ದಿದ್ದರು. ಇದೀಗ ರಾಜ್ಯಾಧ್ಯಕ್ಷನಾಗಲು ತಾವು ಸಿದ್ಧ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಅವರು, ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿ.ವೈ .ವಿಜಯೇಂದ್ರ ಬದಲಾವಣೆಗೆ ನಾನು ಒತ್ತಾಯಿಸಲ್ಲ. ಆದರೆ ನಾನು ಬಿಜೆಪಿ ರಾಜ್ಯಾಧ್ಯಕ್ಷ್ಯನಾಗಲು ಸಿದ್ದನಿದ್ದೇನೆ. ರಾಜ್ಯಾಧ್ಯಕ್ಷ್ಯ ಸ್ಥಾನಕ್ಕೆ ನನ್ನ ಆಯ್ಕೆ ಮಾಡುವಂತೆ ಯತ್ನಾಳ್ ಹೇಳಿದ್ದಾರೆ. ನಾನು ಯತ್ನಾಳ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ನಾನು ಪಕ್ಷದ ಪರ, ಯಾವುದೇ ಬಣದಲ್ಲಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ನನ್ನ ನೇತೃತ್ವದಲ್ಲಿ 150 ಸೀಟ್ ಗೆಲ್ತೀವಿ. ನಾನು ಅಧ್ಯಕ್ಷ ಆದರೆ ಪಕ್ಷದಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳುತ್ತೇನೆ. ಬಿವೈ ವಿಜಯೇಂದ್ರ ಅವರಿಗೆ ಅನುಭವ ಕೊರತೆಯಿದೆ, ಆದರೂ ಯಡಿಯೂರಪ್ಪನವರು ವಿಜಯೇಂದ್ರ ರನ್ನ ಅಧ್ಯಕ್ಷ ಮಾಡಿದ್ರು ಎಂದು ಅಸಮಧಾನ ಹೊರಹಾಕಿದರು. ವಿಜಯೇಂದ್ರ ನನ್ನ ಸಹೋದರ ಇದ್ದಂತೆ, ನಾನು ಅವರ ಮನೆಯವನು ಇದ್ದಂತೆ. ಬಿ.ಎಸ್ ಯಡಿಯೂರಪ್ಪ ಬಿಜೆಪಿಯಲ್ಲಿ ದಕ್ಷಿಣ ಭಾರತದ ಭೀಷ್ಮ ಇದ್ದಂತೆ. ಬಿಜೆಪಿಯಲ್ಲಿರೊ ಗೊಂದಲ ಬಗೆಹರಿಸಲು ಯಡಿಯೂರಪ್ಪ ಅವರು ಮುಂದಾಗಬೇಕು. ನಾನು ಬಿಜೆಪಿ ರಾಜ್ಯಾಧ್ಯಕ್ಷ್ಯ ಆಗಲು ಯಡಿಯೂರಪ್ಪ ಸಹಕಾರ ಬೇಕಿದೆ ಎಂದು ಹೇಳಿದರು.