ಚಿಕ್ಕಮಗಳೂರು : ಪಶ್ಚಿಮ ಘಟ್ಟಗಳ ಸಾಲಿನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ ಕಿಡಿಗೇಡಿಗಳ ಕೈವಾಡವಿದೆ ಎನ್ನಲಾಗುತ್ತಿದೆ. ವಾರಗಳ ಹಿಂದೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನ ಬಿದಿರು ತಳ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು, 500 ಎಕರೆಗೂ ಹೆಚ್ಚು ಪ್ರದೇಶದ ಕೋಟ್ಯಂತರ ಮೌಲ್ಯದ ಸಸ್ಯ ಸಂಪತ್ತು ನಾಶವಾಗಿತ್ತು.
ಈ ಕುರಿತು ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡ್ಗಿಚ್ಚಿಗೆ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ರಾತ್ರಿ ವೇಳೆ ಶಿಕಾರಿಗೆ ತೆರಳಿದ್ದ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಕರ್ನಾಟಕ ಅರಣ್ಯ ಕಾಯ್ದೆ 24 (ಎ2ಜಿ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳ ಪತ್ತೆಗಾಗಿ ಮೂಡಿಗೆರೆ ಆರ್ಎಫ್ಒ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಆರೋಪಿಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಜನವರಿ ಒಂದೇ ತಿಂಗಳಲ್ಲಿ ಎರಡೆರೆಡು ಬಾರಿ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ 500ಕ್ಕೂ ಹೆಚ್ಚು ಪ್ರದೇಶದ ಅರಣ್ಯ ಸಂಪತ್ತು ಆಹುತಿಯಾಗಿತ್ತು. ಪ್ರಾಣಿ, ಸಸ್ಯ ಸಂಕುಲ ಸುಟ್ಟು ಭಸ್ಮವಾಗಿತ್ತು. ಜನವರಿ 20 ರಂದು ಮೂಡಿಗೆರೆ ತಾಲೂಕಿನ ಬಿದುರುತಳದ ಸಮೀಪ ಚಾರ್ಮಾಡಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಪ್ರದೇಶದ ಜೊತೆಗೆ ಅಪಾರ ಪ್ರಮಾಣದ ಪ್ರಾಣಿ ಸಂಕುಲ ನಾಶವಾಗಿತ್ತು. ಅಲ್ಲದೇ ಕಳೆದ ಜ.25ರಂದು ಮತ್ತೆ ಚಾರ್ಮಾಡಿಯ ಘಾಟಿ ಸುಬ್ರಮಣ್ಯ ದೇವಾಲಯದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು.