ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2025ಕ್ಕೆ ದಿನಗಣನೆ ಶುರುವಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಫೆಬ್ರವರಿ 5ರಿಂದ ಮೊದಲುಗೊಂಡು ಒಟ್ಟು 29 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಟೇಕಾಫ್, ಲ್ಯಾಂಡಿಂಗ್ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಮಾಹಿತಿ ನೀಡಿದೆ. ಏರ್ ಶೋ ಕಾರ್ಯಕ್ರಮದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ಪ್ರಯಾಣಿಕರು ಟೇಕಾಫ್, ಲ್ಯಾಂಡಿಂಗ್ ಸ್ಥಗಿತಗೊಳ್ಳಲಿರುವ ಸಮಯವನ್ನು ಗಮನಿಸಿಕೊಂಡು ಪ್ರಯಾಣದ ಯೋಜನೆ ರೂಪಿಸುವಂತೆ ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಸಲಹೆ ನೀಡಿದೆ.
ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತದ ವೇಳಾಪಟ್ಟಿ
ಫೆಬ್ರವರಿ 5ರಿಂದ 15ರ ವರೆಗೆ 10 ದಿನಗಳ ಅವಧಿಯಲ್ಲಿ ವಿವಿಧ ಸಮಯಗಳಲ್ಲಿ ಏರ್ಪೋರ್ಟ್ ಕಾರ್ಯಾಚರಣೆ ಬಂದ್ ಆಗಿರಲಿದೆ. ದಿನಾಂಕಗಳು ಮತ್ತು ಏರ್ಪೋರ್ಟ್ ಕಾರ್ಯಾಚರಣೆ ಸ್ಥಗಿತವಾಗಲಿರುವ ಸಮಯದ ಮಾಹಿತಿ ಇಲ್ಲಿದೆ.
• ಫೆಬ್ರವರಿ 5: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 6: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 7: ಬೆಳಿಗ್ಗೆ 09 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 8: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 9: ಬೆಳಿಗ್ಗೆ 9 ರಿಂದ 11 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 10: ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ 3:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 11-12: ಮಧ್ಯಾಹ್ನ 12:00 ರಿಂದ 2:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
• ಫೆಬ್ರವರಿ 13-14: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5:00 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದ್ದು, ಇದು ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. ಮಿಲಿಟರಿ ಮತ್ತು ನಾಗರಿಕ ವಿಮಾನಯಾನ ತಜ್ಞರು, ಉದ್ಯಮ ವಲಯದ ಪ್ರಮುಖರು ಮತ್ತು ತಂತ್ರಜ್ಞಾನ ಉತ್ಸಾಹಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.