ಬೀದರ್ : ರಸ್ತೆ ಮೇಲೆ ಅಡ್ಡ ಬಂದ ಮಹಿಳೆಯನ್ನು ರಕ್ಷಣೆ ಮಾಡಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರಿನಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ 123 ಕೆಜಿ ಗಾಂಜಾ ಪತ್ತೆಯಾದ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಹತ್ತಿರ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 65ರ ರಾಜೇಶ್ವರ ಗ್ರಾಮದ ಮೇಲ್ಲೇತುವೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಚಾವ್ ಮಾಡಲು ಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ಕಳೆದು ಕೊಂಡು ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಕಾರು ಎರಡ್ಮೂರು ಬಾರಿ ಪಲ್ಟಿ ಹೊಡೆದಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಮನಿಸಿದಾಗ ಕಾರಿನ ಡಿಕ್ಕಿಯೊಳಗಿದ್ದ ಗಾಂಜಾ ಪಾಕೆಟ್ ರಸ್ತೆಗೆ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಮೂಲದ ಫಿರೋಜ್, ರಿಯಾಜ್ ಎಂದು ಗುರುತಿಸ ಲಾಗಿದೆ. ತೆಲಂಗಾಣ ಕಡೆಯಿಂದ ಬರುತ್ತಿದ್ದ ಕಾರ್ ಮಹಾರಾಷ್ಟ್ರದ ಮುಂಬೈಗೆ ಹೋಗುತ್ತಿತ್ತು. ಓರಿಸ್ಸಾದಿಂದ ಇವರು ಗಾಂಜಾ ತರುತ್ತಿದ್ದರು ಎನ್ನಲಾಗಿದೆ. ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ಗಳಿದ್ದರೂ ಖದೀಮರು ಕಾರಿನಲ್ಲಿ ಬಿಂದಾಸ್ ಆಗಿ ಕ್ವಿಂಟಾಲ್ಗಟ್ಟಲೇ ಗಾಂಜಾ ಸಾಗಣೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.